W ಅಂದರೇನು ?

ರಾಜೇಶ್ ಎಂದಿನಂತೆ ಬೆಳಿಗ್ಗೆ ಎದ್ದು ಅವಸರದಲ್ಲಿ ರೆಡಿಯಾಗಿ ಕಛೇರಿಗೆ ಹೋಗಲು ಬಸ್‌ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ. ಸುಮಾರು ಅರ್ಧ ತಾಸು ಕಾದರೂ ಬಸ್ ಬರಲೇ ಇಲ್ಲ. ಬೇರೆ ಕಡೆ ಹೋಗುವ ಬಸ್ಸುಗಳು ಮೇಲಿಂದ ಮೇಲೆ ಹೋಗುತಿದ್ದವು. ಆದರೆ ರಾಜೇಶ್ ಹೋಗುವ ಊರ ಕಡೆ ಬಸ್ಸುಗಳು ಬರದೇ ಇದ್ದುದ್ದಕ್ಕೆ ಸಿಡಿಮಿಡಿಗೊಂಡು ಮನದಲ್ಲೇ ಈ ಅವ್ಯವಸ್ಥತೆಗೆ ತನ್ನನ್ನೇ ತಾನು ಹಳಿದುಕೊಂಡು ಉಗುರು ಕಚ್ಚುತ್ತ ನಿಂತಿದ್ದ. ಆಗಲೇ ಸಮಯ 9.30 ಆಗಿತ್ತು ಗಡಿಯಾರ ನೋಡಿದಾಗಲೆಲ್ಲಾ ಅವನ ಚಡಪಡಿಸುವಿಕೆ ಹೆಚ್ಚಾಗುತ್ತಿತ್ತು. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಬಾಸ್ ಜೊತೆ “ಸೋಮಾರಿ” ಅಂತ ಬೈಸಿಕೊಳ್ಳಬೇಕು, ಹಾಳಾಗಿ ಒಂದು ಬೈಕ್ ತಗೊಳೋಕು ಆಗ್ತಾಯಿಲ್ಲ ಎಂದು ತನ್ನ ಹಣೆಬರಹಕೆ ಜರಿಯುತ್ತಿರುವ ವೇಳೆಗೆ ಬಸ್ ಬಂದಿತು.

ಬಸ್ ಬಂದದ್ದೇ ತಡ ನೆರೆದ ಜನ ನೀ ಮುಂದು, ತಾಮುಂದು ಎಂದು ತಳ್ಳಾಡುತ್ತಾ ಬಸ್ ಏರುತ್ತಿದ್ದರು. ಹೇಗೋ ಕಷ್ಟಪಟ್ಟು ಬಸ್ ಏರಿದ ರಾಜೇಶನಿಗೆ ಕುಳಿತುಕೊಳ್ಳಲು ಒಂದು ಸೀಟ್ ಸಿಕ್ಕಿತು. ಕೂಡಲೇ ಬೆಳಿಗ್ಗೆಯಿಂದ ಮೊಬೈಲ್ ಮುಖ ನೋಡಿಲ್ಲ. ಸಿಕ್ಕಾಪಟ್ಟೆ ಮೆಸೇಜ್ ಬಂದಿವೆ ಎಂದು ಇನ್‌ಬಾಕ್ಸ್ ತೆರೆದು ನೋಡುತ್ತಿದ್ದ. ಬಸ್ ಹೊರಡೋ ವೇಳೆಗೆ ಯಾರೋ ಓಡಿ ಬಂದು ಬಸ್ ಏರಿದಂತಾಯಿತು. ಆದರೆ ರಾಜೇಶ್ ಅದನ್ನು ಗಮನಿಸದೇ ತನ್ನ ಪಾಡಿಗೆ ತಾನು ಮೊಬೈಲ್ ನೋಡುವುದರಲ್ಲಿ ನಿರತನಾಗಿದ್ದ. ಓಡಿ ಬಂದ ಕಾರಣವೋ ಏನೋ ಆ ಗರ್ಭಿಣಿ ಮಹಿಳೆ ಏದುಸಿರು ಬಿಡುತ್ತಿದ್ದಳು. ಮುಖದ ತುಂಬಾ ಬೆವರ ಹನಿಗಳು. ಅವಳ ಜೊತೆಗೆ ಇದ್ದದ್ದು ವಯಸ್ಸಾದ ಅವಳ ತಾಯಿ. ಇಬ್ಬರಿಗೂ ನಿಲ್ಲುವ ಶಕ್ತಿ ಇಲ್ಲ. ಗರ್ಭಿಣಿ ಹೆಣ್ಣುಮಗಳ ತಾಯಿಯ ಕೈಯಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಬೇರೆ ಇತ್ತು. ಅದನ್ನು ನೋಡಿದರೆ ಸಾಕು ಅವರು ಚೆಕಪ್‌ಗಾಗಿ ವೈದ್ಯರಲ್ಲಿಗೆ ಹೋಗುತ್ತಿರುವುದು ತೋರುತ್ತಿತ್ತು. ಇಬ್ಬರಿಗೂ ಕುಳಿತುಕೊಳ್ಳಲು ಸೀಟ್ ಇರಲಿಲ್ಲ. ಯಾರಾದರೂ ಸೀಟ್ ಬಿಟ್ಟುಕೊಡುವರೇನೋ ಎಂದು ಅತ್ತಿತ್ತ ನೋಡುತ್ತಾ ನಿಂತಿದ್ದರು.

ರಾಜೇಶ್ ಮೆಸೇಜ್ ಓದುವುದು ಮುಗಿಸಿ ತಲೆಯೆತ್ತಿ ನೋಡಿದ. ಎದುರಿಗೆ ನಿಂತಿರುವ ಗರ್ಭಿಣಿ ಹೆಣ್ಣುಮಗಳ ನೋಡಿ ಅವನ ಕರುಳು ಚುರ್ ಎಂದಿತು. ಕೂಡಲೇ ಎದ್ದು ನಿಂತು “ಬನ್ನಿ ಸಿಸ್ಟರ್ ಕುಳಿತುಕೊಳ್ಳಿ” ಎಂದು ತನ್ನ ಸೀಟ್ ಬಿಟ್ಟುಕೊಟ್ಟ. ಆ ಗರ್ಭಿಣಿ ಮಹಿಳೆ ಕಣ್ಣಲ್ಲೇ ಧನ್ಯವಾದ ತಿಳಿಸಿ ಕುಳಿತುಕೊಂಡಳು. ಆದರೆ ಅವಳ ತಾಯಿಗೆ ಮಾತ್ರ ಯಾರೂ ಸೀಟ್ ಬಿಟ್ಟುಕೊಡಲಿಲ್ಲ. ಆ ತಾಯಿ ಒಂದು ಸೀಟಿಗೆ ತನ್ನ ಬೆನ್ನು ತಾಗಿಸಿಕೊಂಡು ನಿಂತಿದ್ದಳು. ಅವಳ ಮುಖದ ಭಾವನೆಗಳೇ ಹೇಳುತಿದ್ದವು ತನಗೆ ನಿಲ್ಲುವ ಶಕ್ತಿಯಿಲ್ಲವೆಂದು.

ರಾಜೇಶ್ ಒಮ್ಮೆ ಸುತ್ತಮುತ್ತ ಕಣ್ಣು ಹಾಯಿಸಿದ. ತನ್ನೆದುರಿಗಿರುವ ಸೀಟಿನಲ್ಲಿ ಇಬ್ಬರು ಕಾಲೇಜು ಹುಡುಗರು ಇಯರ್ ಫೋನ್ ಇಟ್ಟುಕೊಂಡು ವೀಡಿಯೋ ನೋಡುತ್ತ ಎಂಜಾಯ್ ಮಾಡುತಿದ್ದರು. ಅವರನ್ನು ನೋಡಿದ ರಾಜೇಶ್‌ಗೆ ಸಿಟ್ಟು ಬಂದಿತು. ಕೂಡಲೇ ಅವರಿಗೆ “ಇಬ್ಬರಲ್ಲಿ ಒಬ್ಬರು ಸೀಟ್ ಬಿಡಿ ಇಲ್ಲಿ ನಿಂತಿರೋ ಅಮ್ಮರಿಗೆ” ಅಂದ. ಆ ಹುಡುಗರಿಗೆ ಕೋಪ ಬಂದಿತು. ನಾವು ಮೊದಲು ಬಂದೀವಿ ನಾವೇಕೆ ಸೀಟ್ ಬಿಡಬೇಕು ಬೇಕಿದ್ರೆ ಅಲ್ಲಿ ಮುಂದೆ ಕುಂತಿದಾರಲ್ಲ ಅವರಿಗೆ ಹೇಳಿ ಹೋಗಿ ಅಂದರು. ಇವನ ಸಿಟ್ಟು ಮತ್ತಷ್ಟು ಜಾಸ್ತಿಯಾಗಿ “ಸ್ವಲ್ಪ ಕಿಟಕಿಯ ಮೇಲೆ ನೋಡಿ ಅಲ್ಲಿ ಮಹಿಳೆಯರಿಗೆ ಮೀಸಲು ಅಂತ ಬರೆದಿದೆ. ಗೊತ್ತಿಲ್ವಾ ನಿಮಗೆ. ನೀವು ಕಾಲೇಜ್ ವಿದ್ಯಾರ್ಥಿಗಳಾ.? ನಾಚಿಕೆ ಆಗೋಲ್ವಾ ಥೂ? ಇದೇನಾ ನಿಮಗೆ ನಿಮ್ಮ ತಂದೆ-ತಾಯಿ, ಟೀಚರ್ಸ್ ಹೇಳಿಕೊಟ್ಟಿರೋದು. ಆ ವಯಸ್ಸಾದ ತಾಯಿಯ ಮುಖದಲ್ಲಿ ಒಮ್ಮೆ ನಿಮ್ಮ ತಾಯಿಯನ್ನು ನೋಡಿ ಆಗ ನಿಮಗೆ ಆ ತಾಯಿಯ ಸಂಕಟ ಏನಂಥ ಅರ್ಥ ಆಗುತ್ತೆ ಎಂದು ಗುಡುಗಿದ. ಅವನ ಮಾತು ಕೇಳಿದ ಆ ಬಸ್‌ನಲ್ಲಿ ಕುಳಿತಿದ್ದ ಕಾಲೇಜು ಹುಡುಗರಿಗೆಲ್ಲಾ ತಮ್ಮ ತಪ್ಪಿನ ಅರಿವಾಗಿತ್ತು ಕೂಡಲೇ ಎದ್ದು ನಿಂತು “ಸ್ವಾರಿ ಸರ್” ಎಂದು ಹೇಳಿ ತಲೆತಗ್ಗಿಸಿದರು. ಆ ತಾಯಿ ಕಣ್ಣಲಿ ನೀರು ತುಂಬಿಕೊಂಡು ರಾಜೇಶನ ತಲೆ ಮುಟ್ಟಿ ದೇವರು ನಿನಗೆ ನೂರು ವರುಷ ಚೆನ್ನಾಗಿಟ್ಟಿರಲಪ್ಪಾ ಎಂದು ಹೇಳಿ ಕುಳಿತುಕೊಂಡರು.

ಇದನ್ನೆಲ್ಲಾ ಗಮನಿಸಿದ ಕಂಡೆಕ್ಟರ್ ಹೃದಯ ತುಂಬಿ ಬಂತು. ಕೂಡಲೇ ರಾಜೇಶನಿಗೆ “ಪ್ರೌಡ್ ಆಫ್ ಯೂ ಸರ್” ಎಂದು ಸೆಲ್ಯೂಟ್ ಹೊಡೆದ. ಆ ಬಸ್ಸಿನಲ್ಲಿದ್ದ ಒಬ್ಬ ಶಿಕ್ಷಕಿ ಎದ್ದು ನಿಂತು ರಾಜೇಶ್‌ಗೆ ನೀವು ಈ ಮಕ್ಕಳ ಕಣ್ಣು ತೆರೆಸಿದ್ರಿ ಬ್ರದರ್ ಗುಡ್ ಜಾಬ್ ಎಂದು ಚಪ್ಪಾಳೆ ತಟ್ಟಿದಳು. ಆಗ ರಾಜೇಶ್ ಆ ಬಸ್ಸಿನಲ್ಲಿದ್ದ ಎಲ್ಲಾ ಮಹಿಳೆಯರ ಉದ್ದೇಶಿಸಿ ಈ ಸಾರ್ವಜನಿಕ ವಾಹನಗಳಲ್ಲಿ ‘Reserved For Women’ ಎಂದು ಬರೆದಿರೋದು ಆ ಸೀಟ್ ಹೆಣ್ಣುಮಗಳಿಗೆ ಮೀಸಲು ಎಂಬ ಕಾರಣಕ್ಕೆ. ಅಲ್ಲಿ ಪುರುಷರು ಕುಳಿತರೆ ನಮಗೆ ಮೀಸಲಿರೋ ಸೀಟ್ ಅದು ನಮಗೆ ಬಿಟ್ಟುಕೊಡಿ ಎಂದು ಕೇಳುವ ಧೈರ್ಯ ನಿಮ್ಮಲ್ಲಿಲ್ಲವೇಕೆ ? ನೀವು ಸಾರ್ವಜನಿಕವಾಗಿ ಯಾವಾಗ ಪ್ರಶ್ನಿಸೋ ಮನೋಸ್ಥೈರ್ಯ ಬೆಳೆಸಿಕೊಳ್ಳುವಿರೋ ಅಂದೇ ನೀವು ಹೊರಗೆ ನಿಮ್ಮ ಮೇಲೆ ನಡೆಯುವ ದೌರ್ಜನ್ಯಗಳ ಸ್ವಲ್ಪನಾದರೂ ತಪ್ಪಿಸಬಹುದು. ಹಕ್ಕಿ ಒಂದು ರೆಕ್ಕೆಯಿಂದ ಆಗಸದಲ್ಲಿ ಹಾರಲಾರದು ಹಾಗೆಯೇ ಸುಸ್ಥಿರ ಸಮಾಜಕ್ಕೆ ನಿಮ್ಮ ಅಭ್ಯುದಯವೂ ಮುಖ್ಯವಾಗಿದೆ. ಇನ್ನು ಮುಂದೆ ನಿಮಗೆ ಮೀಸಲಿರೋ ಸೀಟ್ ನಿಮ್ಮದು ಎಂದು ಹೇಳುತ್ತಿದ್ದಂತೆ ಎಲ್ಲಾ ಮಹಿಳೆಯರು ಜೋರಾಗಿ ಚಪ್ಪಾಳೆ ತಟ್ಟಿದರು. ರಾಜೇಶ್ ಇಳಿಯುವ ಸ್ಥಳ ಬಂದಿದ್ದರಿಂದ ಎಲ್ಲರಿಗೂ ನಮಸ್ಕರಿಸಿ ಇಳಿದು ತನ್ನ ಕಛೇರಿ ಕಡೆ ಹೊರಟ. ಅಂದು ಅವನ ಮನಸ್ಸು ತಿಳಿಮುಗಿಲ ತೊಟ್ಟಿಲಾಗಿ ಜೋಗುಳ ಹಾಡುತಿತ್ತು.

ಕಥೆಯ ನೀತಿ:-ಎಲ್ಲರಿಗೂ ಸಮಬಾಳು ಸಮಪಾಲು.
✍️ ಶೆಲಿ (ಶೆಕ್ಷಾವಲಿ ಮಣಿಗಾರ್.ಶಿಕ್ಷಕರು)

ನೀವೂ ಒಳ್ಳೆಯ ಕಥೆ ಬರೆಯಬೇಕೆಂದರೆ ನಮಗೆ ಈ-ಮೇಲ್ ಮಾಡಿ

ಅಥವಾ ವಾಟ್ಸ್ ಆಪ್ ಮಾಡಿ – 82963 01915
email maadi – kannadanewslive01@gmail.com

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top