ರಾಜ್ಯದ ಎಲ್ಲಾ ಥಿಯೇಟರ್ ನಲ್ಲೂ ಹಬ್ಬದ ಸಂಭ್ರಮ.

ನಾಡಿನಲ್ಲಿ ಒಂದು ಕಡೆ ನವರಾತ್ರಿ ಸಂಭ್ರಮವಾದ್ರೆ, ಇನ್ನೊಂದ್ ಕಡೆ ರಾಜ್ಯದ ಎಲ್ಲಾ ಥಿಯೇಟರ್ ನಲ್ಲೂ ಹಬ್ಬದ ಸಂಭ್ರಮ. ಯಾಕಂದ್ರೆ ಇಂದಿನಿಂದ ಕಿಚ್ಚ ಹಾಗೂ ಶಿವಣ್ಣನ ಆರ್ಭಟ ಶುರುವಾಗಿದೆ.

ಹೌದು.. ದೇಶಾದ್ಯಂತ ಇಂದು ನವರಾತ್ರಿ ಮನೆ ಮಾಡಿದ್ರೆ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರ ತೆರೆಗೆ ಅಪ್ಪಳಿಸಿದೆ. ಗಡಿಜಿಲ್ಲೆ ಬಳ್ಳಾರಿ, ಮಂಗಳೂರು ಸೇರಿದಂತೆ ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮಂಡ್ಯ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ವಿಲನ್ ಫಸ್ಟ್ ಶೋ ಬೆಳಗ್ಗೆ 5 ಗಂಟೆಗೆ ಆರಂಭವಾಗಿದೆ. ಇನ್ನೂ ಕೆಲವೆಡೆ 10 ಗಂಟೆಗೆ ಶೋ ಶುರುವಾಗಲಿದ್ದು, ಥಿಯೇಟರ್ ಮುಂದೆ ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ದಾರೆ. ಎಲ್ಲಾ ಥಿಯೇಟರ್ ಗಳ ಮುಂದೆ ದಿ ವಿಲನ್ ಫಸ್ಟ್ ಶೋ ನೋಡೋಕೆ ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದಾರೆ.. ಇನ್ನು ಮುಂದಿನ 5 ದಿನಗಳ ಕಾಲ ಚಿತ್ರದ ಟಿಕೆಟ್ ಸೋಲ್ಡ್ ಔಟ್ ಆಗಿದೆ ಅಂತಾರೆ ಥಿಯೇಟರ್ ನವರು.

ಶಿವಮೊಗ್ಗದ ಥಿಯೇಟರ್ ನಲ್ಲಿ ನಲ್ಲಿ 4 ದಿನಗಳ ಟಿಕೇಟ್ ಗಳು ಈಗಾಗಲೇ ಆನ್ ಲೈನ್ ನಲ್ಲಿ ಬುಕ್ ಆಗಿವೆ. ಮಧ್ಯರಾತ್ರಿಯೇ ಲಕ್ಷ್ಮಿ ಟಾಕೀಸ್ ಬಳಿ ಡೊಳ್ಳು, ತಮಟೆ ತರಿಸಿ ಅಭಿಮಾನಿಗಳು ಡ್ಯಾನ್ಸ್ ಮಾಡಿದರು. ಕುಂಬಳ ಕಾಯಿ ಹೊಡೆದು, ಕಟೌಟ್ ಮುಂದೆ ಕರ್ಪೂರ ಹಚ್ಚಿ ಸಂಭ್ರಮಿಸಿದರು. ಪೊಲೀಸ್ ಮತ್ತು ಜಿಲ್ಲಾಡಳಿತದ ಅನುಮತಿ ಪಡೆಯದೇ ಲಕ್ಷ್ಮೀ ಟಾಕೀಸ್ ಮಾಲೀಕರು ಟಿಕೆಟ್ ಮಾರಾಟ ಮಾಡಿದ್ದರು.

ಎಲ್ಲೆಡೆ ಟಿಕೆಟ್‍ಗೆ ನೂಕುನುಗ್ಗಲು ಕಂಡು ಬರುತ್ತಿದೆ. ಮಲ್ಟಿಪ್ಲೆಕ್ಸ್ ಗಳು ಹೌಸ್‍ಫುಲ್ ಆಗಿವೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಸಖತ್ ಹವಾ ಸೃಷ್ಟಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top