ಮನೆಯಲ್ಲಿಯೇ ಸಿಗೋ ಈ ವಸ್ತುಗಳನ್ನು ಉಪಯೋಗಿಸಿ ಆರೋಗ್ಯವಾಗಿರಿ!

ಮನೆಯಲ್ಲಿ ಅಡುಗೆಗೆ ಬಳಸುವ ಈ ವಸ್ತುಗಳನ್ನು ಬಳಸುವುದರಿಂದ ನೀವೂ ನಿಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಜೊತೆಗೆ ವೈದ್ಯರ ಬಳಿ ಹೋಗಿ ದುಪ್ಪಟ್ಟು ಹಣ ವ್ಯಯಮಾಡುವುದು ಸಹ ತಪ್ಪುತ್ತದೆ.

ಏಲಕ್ಕಿ
ಏಲಕ್ಕಿಯನ್ನು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಸೇವಿಸಿದರೆ ಅದು ತಕ್ಷಣ ಶಮನಗೊಳ್ಳುತ್ತದೆ, ಒಣ ಕೆಮ್ಮು ಇದ್ದರೆ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಬೆರೆಸಿ ಸೇವಿಸಿದರೆ ಕೆಮ್ಮು ಮಾಯವಾಗುತ್ತದೆ. ಲೂಸ್‌ ಮೋಷನ್‌ ಇದ್ದಾಗ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ತಕ್ಷಣ ಸಮಸ್ಯೆ ಬಗೆಹರಿಯುತ್ತದೆ.

ಸೌತೆಕಾಯಿ
ಸೌತೆಕಾಯಿಯನ್ನು ಸಿಪ್ಪೆ ಸಮೇತ ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಸೇವನೆ ಮಾಡುತ್ತಿದ್ದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಸೌತೆಕಾಯಿಯನ್ನು ಮುಖದ ಚರ್ಮಕ್ಕೆ ತಿಕ್ಕುವುದರಿಂದ ಮುಖದ ಕಾಂತಿಯು ಹೆಚ್ಚುತ್ತದೆ, ಜೊತೆಗೆ ಸೌತೆಕಾಯಿ ತಿರುಳನ್ನು ಅಂಗಾಲಿಗೆ ಉಜ್ಜಿಕೊಳ್ಳುವುದರಿಂದ ಕಣ್ಣು ಊರಿ ಇದ್ದರೆ ಕಮ್ಮಿಯಾಗುತ್ತದೆ, ಜೊತೆಗೆ ಒಂದೊಳ್ಳೆ ನಿದ್ದೆಯು ಬರುತ್ತದೆ.

ಈರುಳ್ಳಿ
ಊಟ ಮಾಡುವಾಗ ಒಂದು ತುಂಡು ಈರುಳ್ಳಿಯನ್ನು ಸೇವಿಸುತ್ತಿದ್ದರೆ ರಕ್ತಹೀನತೆ ಇದ್ದರೆ ಆ ಸಮಸ್ಯೆ ದೂರವಾಗುತ್ತದೆ. ನಿಮಗೇನಾದರೂ ಮೂಗಿನಲ್ಲಿ ರಕ್ತ ಬರುವ ಸಮಸ್ಯೆಯಿದ್ದರೆ ಈರುಳ್ಳಿಯ ರಸವನ್ನು ಒಂದೆರಡು ಹನಿ ಮೂಗಿಗೆ ಬಿಡುವುದರಿಂದ ರಕ್ತ ಸೋರುವ ಸಮಸ್ಯೆ ಇರುವುದಿಲ್ಲ.

ಕಡಲೆಕಾಳು
ಕಡಲೆಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ಮಿಶ್ರಣವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದ ತೂಕ ಹೆಚ್ಚುತ್ತದೆ. ಹುರಿದ ಕಡಲೆ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ಕಮ್ಮಿಯಾಗುತ್ತದೆ.

ಹಲಸಿನ ಹಣ್ಣು
ತಲೆನೋವಿನ ಸಮಸ್ಯೆ ಇರುವವರು ಹಲಸಿನ ಹಣ್ಣನ್ನು ತುಪ್ಪದೊಡನೆ ಬೆಲ್ಲ ಸೇರಿಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಹಲಸಿನ ಹಣ್ಣನ್ನು ಬಾಳೆಹಣ್ಣಿನೊಡನೆ ತಿನ್ನುವುದರಿಂದ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ.

ಶುಂಠಿ
ಶೀತ ಮತ್ತು ಗಂಟಲು ನೋವು ಇರುವವರು ಶುಂಠಿ, ಲವಂಗ, ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಬಾಯಿಯಲ್ಲಿ ಇಟ್ಟುಕೊಂಡು ಜಗಿದರೆ ಗಂಟಲು ನೋವು, ಶೀತ, ನಿವಾರಣೆಯಾಗುತ್ತದೆ.ಒಣ ಶುಂಠಿಯನ್ನು ಕೆಂಡದ ಮೇಲೆ ಇಟ್ಟು ಅದನ್ನು ಪುಡಿಮಾಡಿ ಉಪ್ಪು ಬೆರಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ದೂರವಾಗುತ್ತದೆ.

ಮೆಂತ್ಯೆ ಸೊಪ್ಪು
ಸಕ್ಕರೆ ರೋಗ ಇರುವವರು ಮೆಂತ್ಯೆ ಸೊಪ್ಪು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ.

ಜೇನು ತುಪ್ಪ
ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಲೇಪನ ಮಾಡುವುದರಿಂದ ಉರಿ ಶಮನವಾಗಿ ಗಾಯ ಬೇಗನೇ ವಾಸಿಯಾಗುತ್ತದೆ. ಜೊತೆಗೆ ಹುಳುಕಡ್ಡಿ, ಇಸುಬು ಇಂತಹ ಚರ್ಮರೋಗಗಳಿಗೆ ಜೇನುತುಪ್ಪವನ್ನು ಸವರುವುದರಿಂದ ಸಮಸ್ಯೆಗೆ ಬಹುಬೇಗ ಗುಣಮುಖವಾಗುತ್ತದೆ.

ಹಾಗಲ ಕಾಯಿ
ಮಧುಮೇಹದಿಂದ ಬಳಲುತ್ತಿದ್ದವರು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಹೆಚ್ಚಾಗದೆ ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿರುತ್ತದೆ. ಅಲ್ಲದೇ ಕರುಳಿನ ಹುಣ್ಣು,ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.

ಅಡುಗೆ ಉಪ್ಪು
ಬಿಸಿ ನೀರಿನಲ್ಲಿ ಉಪ್ಪು ಬೆರಸಿ ನಂತರ ಆ ನೀರನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿ ಆದ ಹುಣ್ಣು ಶಮನವಾಗುತ್ತದೆ.

ಕೊತ್ತಂಬರಿ
ತಲೆನೋವು ಇರುವವರು ಕೊತ್ತಂಬರಿ ಸೊಪ್ಪಿನ ರಸವನ್ನು ಹಣೆಗೆ ಲೇಪನ ಮಾಡುವುದರಿಂದ ತಲೇನೋವು ನಿವಾರಣೆಯಾಗುತ್ತದೆ. ಕೊತ್ತಂಬರಿ ಸೊಪ್ಪು ಜಗಿಯುವುದರಿಂದ ಬಾಯಿಂದ ಬರುವ ದುರ್ಗಂಧ ವಾಸನೆ ಬರುವುದಿಲ್ಲ.

ವೀಳ್ಯದೆಲೆ
ವೀಳ್ಯದೆಲೆಗೆ ಸ್ವಲ್ಪ ಕರಿ ತುಳಸಿ ಹಾಗೂ ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ. ವೀಳ್ಯದೆಲೆಗೆ ಹರಳೆಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರಿದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಸುಲಭವಾಗಿ ಮೂತ್ರ ಮಾಡುತ್ತದೆ.

ಈ ರೀತಿ ಮನೆಯಲ್ಲಿಯೇ ಸಿಗುವ ಅನೇಕ ವಸ್ತುಗಳನ್ನು ಬಳಸಿಕೊಂಡು ಮನೆಯಲ್ಲಿ ಮದ್ದು ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top