ನೀನೂ ಅಲ್ಲಿಯೂ ಸಿಗಲಿಲ್ಲ,ಇಲ್ಲಿಯೂ ಸಿಗಲಿಲ್ಲ..! ಇದು ಚೆಲುವಿನ ಗಣಿ ಮಧುಬಾಲ ಲೈಫ್ ಸ್ಟೋರಿ..!

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ಮಾನ ಮುಚ್ಚೋಕೆ. ಆದ್ರೆ ಇಷ್ಟು ಸಿಗಬೇಕೆಂದ್ರೂ ಕೆಲವೊಬ್ಬರು ಅದೆಷ್ಟು ಕಷ್ಟಪಡಬೇಕು ಗೊತ್ತಾ.? ದಿನನಿತ್ಯದ ಈ ಅಗತ್ಯತೆಗಳನ್ನ ಹೊಂದಿಸಿಕೊಳ್ಳುವ ಬವಣೆಯಲ್ಲಿ ಹಲವರು ಹಲವು ದಾರಿ ಕಂಡುಕೊಳ್ತಾರೆ. ಇಲ್ಲಿ ಒಬ್ಬ ಹೆಣ್ಣುಮಗಳು ಕಂಡುಕೊಂಡಿದ್ದು ಬಣ್ಣದ ಬದುಕನ್ನ, ಅವಳಿಗೆ ಈ ಬಣ್ಣದ ಕೃಷಿಯಿಂದ ತನ್ನ ಮನೆಯವರ ಹೊಟ್ಟೆ ತುಂಬಿಸಬೇಕಿತ್ತು ಅಷ್ಟೆ. ಊರು ಬಿಟ್ಟು ಬಂದ ಅವರ ಕುಟುಂಬಕ್ಕೆ ಒಂದು ಸೂರು ಬೇಕಿತ್ತಷ್ಟೆ.. ದುರಾದೃಷ್ಟ ಅಂದ್ರೆ ಅಪ್ಪ ದುಡಿದು ತಂದಾಕಿದ್ದನ್ನ ತಿಂದುಕೊಂಡು, ಆರಾಮಾಗಿರಬೇಕಿದ್ದ ಈಕೆ ತನ್ನ ಒಂಭತ್ತನೇ ವಯಸ್ಸಿಗೇ ದುಡಿಯಲಾರಂಭಿಸಿದಳು. ಬೆಳಿಗ್ಗೆ ತಿಂಡಿಗೆ ದುಡ್ಡಿಲ್ಲದೆ ಸೀದಾ ಸೆಟ್‍ಗೆ ಖಾಲಿ ಹೊಟ್ಟೆಯಲ್ಲೆ ಬರ್ತಿದ್ದ ಈ ಹುಡುಗಿ, ಕ್ಯಾಮೆರಾ ಮುಂದೆ ಮಾತ್ರ ಯಾವತ್ತೂ ಅರೆಹೊಟ್ಟೆಯವಳಾಗಿ ನಿಲ್ಲಲೇ ಇಲ್ಲ. ಅದೆಷ್ಟೋ ದಿನ ಆ ನಾಯಕಿಯ ಕುಟುಂಬ ಕಣ್ಣುಗಳಲ್ಲಿ ಆಸೆ ಹೊತ್ತು, ಊಟವಿಲ್ಲದೆ ಬರೀ ನೀರು ಕುಡಿದು ಮಲಗುತ್ತಿತ್ತು.

ಮುಮ್ತಾಜ್ ಜಹಾನ್ ಬೇಗಮ್ ದೆಹ್ಲವಿ.. ಅದು ಆಕೆಯ ಮನೆ ಹೆಸರು.. ಆಕೆಗಾಗ ವಯಸ್ಸು ಒಂಭತ್ತು,, ದೆಹಲಿಯ ತಂಬಾಕು ಕಾರ್ಖಾನೆಯಲ್ಲಿ ಅಪ್ಪ ಅತಾಉಲ್ಲಾ
ಖಾನ್‍ಗೆ ಕೆಲಸ.. ಎಲ್ಲ ಮಕ್ಕಳಂತೆ ಕುಂಟೆ ಬಿಲ್ಲೆ, ಕಣ್ಣಾಮುಚ್ಚಾಲೆ ಆಡಿಕೊಂಡು ಹಾಯಾಗಿದ್ದ ಪುಟಾಣಿಗೆ ಆಘಾತ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ.. ಆದರೆ ಅದೊಂದು ದಿನ ಮನೆಯಲ್ಲಿ ಅನ್ನಕ್ಕೆ ಬರ ಬಂದಾಗ ಗೊತ್ತಾಯ್ತು, ಅಪ್ಪ ಅತಾಉಲ್ಲಾ ಕೆಲಸ ಕಳಕೊಂಡಿದ್ದ..

ಮುಂಬೈಗೆ ವಲಸೆ ಬಂದ ಅತಾಉಲ್ಲಾ ಖಾನ್ ಕುಟುಂಬಕ್ಕೆ ಮತ್ತೊಂದು ಆಘಾತವಾಗಿ ಪರಿಣಮಿಸಿದ್ದು ಆರನೇ ವಯಸ್ಸಿನ ಮೂವರು ಹೆಣ್ಣುಮಕ್ಕಳು ಮತ್ತು ಎರಡು ಗಂಡು ಮಕ್ಕಳ ಮರಣ.. ಕೆಲಸ ಕಳಕೊಂಡಿದ್ದ ಅತಾಉಲ್ಲಾ ಖಾನ್‍ಗೆ ಐದನೇ ಮಗಳು ಮುಮ್ತಾಜ್ ಅಂದ್ರೆ ಬಹಳ ಪ್ರೀತಿ, ಆಕೆ ಚೂಟಿಯಾಗಿದ್ದದ್ದನ್ನ ನೋಡಿ ಇವಳನ್ನ ಹೇಗಾದರೂ ಮಾಡಿ ಸಿನಿಮಾಗಳಿಗೆ ಸೇರಿಸಬೇಕಲ್ಲ ಎಂಬ ಆಸೆ ದೆಹಲಿಯಲ್ಲಿ ವಾಸವಾಗಿದ್ದಾಗಿನಿಂದಲೂ ಇತ್ತು. ಈಗ ತುತ್ತು ಅನ್ನದ ಪ್ರಶ್ನೆ ಬಂದಾಗ ಈ ಚೂಟಿ ಹುಡುಗಿಯನ್ನ ಜೊತೆಮಾಡಿಕೊಂಡು ಬಾಂಬೆಯ ಸ್ಟುಡಿಯೋಗಳಿಗೆ ಸುತ್ತಲಾರಂಭಿಸಿದ್ದ ಅತಾಉಲ್ಲಾ ಖಾನ್..

ನೀರಿನಲ್ಲಿ ಮುಳುಗುತ್ತಿರುವಾಗ ಉಳಿಯಲು ಸಣ್ಣ ಹುಲ್ಲು ಕಡ್ಡಿ ಸಿಕ್ಕರೆ ಸಾಕು ಎಂಬಂತೆ ಬಡತನದಿಂದ, ಹಸಿವಿನಿಂದ ಬಳಲುತ್ತಿದ್ದ ಕುಟುಂಬಕ್ಕೆ ಆಸರೆಯಾಗಿ ಸಿಕ್ಕಿದ್ದು ಬಸಂತ್ ಎಂಬ ಚಿತ್ರ.. 1942 ರಲ್ಲಿ ರಿಲೀಸಾದ ಈ ಚಿತ್ರ ಸೂಪರ್ ಹಿಟ್, ಇಲ್ಲಿ ಮುಮ್ತಾಜ್‍ಗೆ ಪುಟ್ಟ ಬಾಲಕಿಯ ಪಾತ್ರ ಸಿಕ್ಕಿತ್ತು..

ಬಸಂತ್ ಚಿತ್ರ ಸೂಪರ್ ಹಿಟ್ಟಾಗಿದ್ದೇ ತಡ ಮುಮ್ತಾಜ್‍ಗೆ ಇನ್ನಿಲ್ಲದ ಬೇಡಿಕೆ, ಒಂದಲ್ಲಾ ಎರಡಲ್ಲಾ ಸುಮಾರು ಹದಿನೈದು ಚಿತ್ರಗಳಲ್ಲಿ ಬಾಲನಟಿಯಾಗಿ ಮುಮ್ತಾಜ್ ಪ್ರಶಂಸೆ ಗಳಿಸಿಬಿಟ್ಲು,, ಆಗಿನ ಕಾಲದ ಸೂಪರ್ ಸ್ಟಾರ್ ದೇವಿಕಾ ರಾಣಿಯ ಚಿತ್ರದಲ್ಲೂ, ಮುಮ್ತಾಜ್ ಒಂದು ಪುಟ್ಟ ಪಾತ್ರ ಮಾಡಿದ್ದಳು.. ಮುಮ್ತಾಜ್‍ಳ ನಟನೆ ನೋಡಿದ ದೇವಿಕಾ ರಾಣಿ `ಇನ್ನು ಮುಂದೆ ನೀನು ಮುಮ್ತಾಜ್ ಅಲ್ಲ ಮಧುಬಾಲಾ’ ಅಂದುಬಿಟ್ಟರು, ಬಾಲ್ಯ ಕಳೆದು ಪ್ರಾಯಕ್ಕೆ ಅಡಿ ಇಡುತ್ತಿದ್ದ ಮುಮ್ತಾಜ್ ಅದನ್ನ ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ.. ತನ್ನ ಮನೆ ಹೆಸರಿನಿಂದಲೇ ಮುಂದುವರೆದ ಮುಮ್ತಾಜ್‍ಗೆ ಮೊಟ್ಟ ಮೊದಲ ಬಾರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತ್ತು, ಭಾರತದ ಶೋಮ್ಯಾನ್ ಅಂತ ಕರೆಯಲ್ಪಡುವ ರಾಜ್ ಕಪೂರ್ ಗೆ ಈ ಹುಡುಗಿ ನಾಯಕಿ, ಚಿತ್ರದ ಹೆಸರು ನೀಲ್‍ಕಮಲ್..

ನೀಲ್‍ಕಮಲ್,, ಬಾಕ್ಸಾಫಿಸ್‍ನಲ್ಲಿ ನೆಲಕಚ್ಚಿಬಿಡ್ತು.. ಆದ್ರೆ ಮುಮ್ತಾಜ್‍ಗೆ ದೊಡ್ಡ ಹೆಸರು ಬಂತು.. ಆಗಲೇ ತಂದೆ ಅತಾಉಲ್ಲಾ ಖಾನ್ ಮತ್ತು ಮಗಳಿಗೆ ದೇವಿಕಾ ರಾಣಿಯ ಮಾತು ಮತ್ತು ಸೂಚಿಸಿದ ಹೆಸರು ನೆನಪಿಗೆ ಬಂತು, ಮಧುಬಾಲಾ. ಜೇನಿನಷ್ಟು ಸವಿಯಾದ ಸೌಂದರ್ಯವುಳ್ಳವಳು, ಮಧುಬಾಲಾ.

ಹೆಸರು ಬದಲಾದರಿಂದಲೊ ಅಥವಾ ನಿಜಕ್ಕೂ ಆಕೆಯ ಪ್ರತಿಭೆಯ ಪ್ರಭೆಯೊ, ಮಧುಬಾಲಾ ಜೀವನದ ಸರ್ವಶ್ರೇಷ್ಠ ಹಂತ ಆರಂಭವಾಯ್ತು, ಆಗಿನ ಕಾಲದ ಸೂಪರ್ ಸ್ಟಾರ್ ಅಶೋಕ್ ಕುಮಾರ್ ರೊಂದಿಗೆ ಮಧುಬಾಲಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ರು, ಹಲವಾರು ನಾಯಕಿಯರ ಸ್ಕ್ರೀನ್ ಟೆಸ್ಟ್ ನಂತರ ಕಡೆಗೆ ಆಯ್ಕೆಯಾಗಿದ್ದು ಮಧುಬಾಲಾ.. ಈ ಸ್ಕ್ರೀನ್‍ಟೆಸ್ಟ್ ನಲ್ಲಿ 40-50 ರ ದಶಕದಲ್ಲಿ ಫೇಮಸ್ಸಾಗಿದ್ದ ಸುರಯ್ಯ ಸಹ ಇದ್ರು, ಆದ್ರೆ ಮಧುಬಾಲಾ ಚೆಲುವಿನ ಮುಂದೆ ಸುರಯ್ಯ ಸೌಂದರ್ಯ ಹೊಳಪು ಕಳೆದುಕೊಂಡಿತ್ತು. ಮಹಲ್ ಚಿತ್ರಕ್ಕೆ ಆಯ್ಕೆಯಾದಾಗ ಮಧುಬಾಲಾಗೆ 16 ರ ಪ್ರಾಯ…

ಬಾಲ್ಯದ ಕಷ್ಟದ ದಿನಗಳು ನಿಧಾನವಾಗಿ ಕಡಿಮೆಯಾಗ್ತಾ ಬಂತು, ಮಧು ಅಪ್ಪನ ರೆಟ್ಟೆ ಗಾತ್ರಕ್ಕೆ ಬೆಳೆದು ನಿಂತಿದ್ದಳು.. ಅಪ್ಪ ಮಗಳಿಗೆ ಕಾವಲಾಗಿ ನಿಂತನೇ ಹೊರ್ತು ಕುಟುಂಬಕ್ಕಾಗಲೀ ತನಗಾಗಲೀ ಆಸರೆಯಾಗಲಿಲ್ಲ. ತನ್ನೆಲ್ಲಾ ಬಾಲ್ಯವನ್ನ ಮುಗ್ಧವಾಗಿ ಕಳೆಯದೆ ಬರೀ ಚಿತ್ರೀಕರಣಗಳಲ್ಲಿ ಕಳಕೊಂಡುಬಿಟ್ಟಿದ್ದಳು.. ಒಂದು ದೊಡ್ಡ ಸ್ಟಾರ್‍ನ ಜೊತೆ ಪರಿಪೂರ್ಣ ನಾಯಕಿಯಾಗುವ ಅವಕಾಶವೂ ಸಿಕ್ತು. ಸಹಜವಾಗಿ ಒಂದು ಶುದ್ಧ ಮನಸ್ಸನ್ನ, ತನಗಾಗಿ ತುಡಿಯುವ ಜೀವವನ್ನ ಬಯಸುತ್ತಿದ್ದಳು ಮಧು. ಅವಳಿಗೆ ಅವನೇನೊ ಸಿಕ್ಕ, ಅವಳು ಆಕೆಯನ್ನ ಅಗಾಧವಾಗೂ ಪ್ರೀತಿಸಿದಳು ? ಆದ್ರೆ ಅವನು ಒಂದು ಎಡವಟ್ಟು ಈ ಸಂಬಂಧವನ್ನ ಮುರಿದುಬಿಟ್ಟಿತ್ತು.. ಕೋರ್ಟ್‍ನಲ್ಲಿ ಕೇಸಾಯ್ತು, ಅವಮಾನಗಳಾದವು. ಆದರೂ ಆಕೆ ಮಾತ್ರ ಬಣ್ಣ ಹಚ್ಚೋದನ್ನ ಬಿಡುವಂತಿರಲಿಲ್ಲ, ಯಾಕಂದ್ರೆ ಅವರ ಮನೆಯಲ್ಲಿ ಬಡತನ ಸದಾ ನಗುತ್ತಲೇ ಇತ್ತು.

ಮಹಲ್ ಚಿತ್ರದಿಂದ ಭಾರತೀಯ ಚಿತ್ರರಂಗಕ್ಕೆ ಎರಡು ಸ್ಟಾರ್‍ಗಳು ಸಿಕ್ಕರು.. ಮೊದಲನೆಯದಾಗಿ ಮಧುಬಾಲಾ, ಎರಡನೆಯವರು ಲತಾ ಮಂಗೇಶ್ಕರ್.. ಲತಾ ಮಂಗೇಶ್ಕರ್ ಈ ಚಿತ್ರಕ್ಕೂ ಮುಂಚೆ ಸಾಕಷ್ಟು ಚಿತ್ರಗಳಿಗೆ ಹಾಡಿದ್ದರೂ ಸಹ ಅವರ ಹೆಸರು ಜನಸಾಮಾನ್ಯರಿಗೆ ಗೊತ್ತಾಗಿರಲಿಲ್ಲ. ಆದ್ರೆ ಈ ಮಧುರಗೀತೆ ಲತಾರನ್ನ ಉತ್ತುಂಗಕ್ಕೇರಿಸ್ತು, ಮಧುಬಾಲಾ ಅಭಿನಯಿಸಿದ್ದ ಈ ಹಾಡು ಎಷ್ಟು ಖ್ಯಾತಿ ಗಳಿಸಿತು ಅಂದ್ರೆ ಮುಂದೆ ಲತಾ ಹಾಡುಗಾರಿಕೆಯೇ ಮಧುಗೆ ಫಿಕ್ಸ್ ಆಯ್ತು..

ಈ ಚಿತ್ರ ತೆರೆಗೆ ಬರೋಕೆ ಮುಂಚೆ 1944 ರಲ್ಲಿ ಜ್ವರ್ ಬತಾ ಚಿತ್ರ ರಿಲೀಸಾಗಿತ್ತು, ಇದು ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಅವರ ಎಂಟ್ರಿ ಸಿನಿಮಾ. ನಾಯಕಿ ಮಧುಬಾಲಾ.. ಆಗ ಇವರಿಬ್ಬರು ಅಷ್ಟು ಪರಿಚಿತರೂ ಅಲ್ಲ, ಪರಸ್ಪರ ಕೂತು ಒಂದೈದು ನಿಮಿಷ ಮಾತಾಡಿದವರೂ ಅಲ್ಲ. ಈ ಸಿನಿಮಾ ರಿಲೀಸಾದ ಆರನೇ ವರ್ಷಕ್ಕೆ ಮತ್ತೆ ಈ ಜೋಡಿ ತರಾನಾ ಚಿತ್ರಕ್ಕಾಗಿ ಒಂದಾಯ್ತು. ಅಲ್ಲೆ ಕಣ್ಣು ಕಣ್ಣು ಒಂದಾಯ್ತು, ಮನಸು ತನಗೆ ತಾನೆ ಮಾತಾಡಿಕೊಳ್ಳೋಕೆ ಆರಂಭಿಸಿತು..

ಇವರಿಬ್ಬರ ಈ ಪ್ರೀತಿ ಯಾವ ಮಟ್ಟಕ್ಕೆ ಹೋಯಿತು ಅಂದ್ರೆ, ಒಮ್ಮೆ ತನಗೆ ಸಂಬಂಧವೇ ಇಲ್ಲದ ಸಿನಿಮಾ ಪ್ರೀಮಿಯರ್ ಶೋಗೆ ದಿಲೀಪ್‍ನೊಂದಿಗೆ ಮಧುಬಾಲಾ ಕೈ ಕೈ ಹಿಡಿದು ನಡೆದುಹೋಗ್ತಾಳೆ, ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಮಧು, ಶೂಟಿಂಗ್ ಮಗಿದ ನಂತರ ಸೀದಾ ಮನೆ ಸೇರುತ್ತಿದ್ದ ಮಧು, ಅವತ್ತು ದಿಲೀಪ್‍ನೊಂದಿಗೆ ಖುಲ್ಲಂಖುಲ್ಲ ಕಾಣಿಸಿಕೊಂಡು ಎಲ್ಲರನ್ನ ಆಶ್ಚರ್ಯಕ್ಕೀಡು ಮಾಡ್ತಾಳೆ..

ಸುಮಾರು ಆರು ವರ್ಷಗಳು ಪ್ರೀತಿಸುವ ಈ ಜೋಡಿ ನಾಲ್ಕು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ರು.. ಇವರ ಕಾಂಬಿನೇಶನನ್ನಿನ ಐದನೇ ಚಿತ್ರವಾಗಿ ನಯಾಡೋರ್ ಚಿತ್ರ ಸೆಟ್ಟೇರಿ ಅರ್ಧದಷ್ಟು ಚಿತ್ರೀಕರಣವನ್ನು ಮುಗಿಸಿತ್ತು, ಈ ಚಿತ್ರದ ನಿರ್ದೇಶಕ ಬಿ.ಆರ್.ಚೋಪ್ರ ಶೂಟಿಂಗನ್ನ ದೂರದ ಬೋಪಾಲ್‍ನಲ್ಲಿ ಮಾಡುವುದು ಅಂತ ತೀರ್ಮಾನ ಮಾಡ್ತಾರೆ, ಮಧುಬಾಲಾ ತಂದೆ ಅತಾಉಲ್ಲಾ ಖಾನ್ ಆಗೋಲ್ಲ' ಅಂತ ಕಡಾಖಂಡಿತವಾಗಿ ಹೇಳಿಬಿಟ್ರು.. ದಿಲೀಪ್ ಕುಮಾರ್ ಮಧ್ಯಸ್ಥಿಕೆಯೂ ಫಲಕಾರಿಯಾಗದೆ, ಕಡೆಗೆ ಈ ವಿವಾದ ಕೋರ್ಟ್ ಮೆಟ್ಟಿಲೇರಿದಾಗ, ಸ್ವತಃ ದಿಲೀಪ್ ಕಮಾರ್, ಮಧುಬಾಲಾ ಪ್ರಿಯತಮ ದಿಲೀಪ್ ಕುಮಾರ್, ಮಧುಬಾಲಾ ವಿರುದ್ಧ ಮಾತನಾಡುತ್ತಾನೆ, ಆಗಲೇ ಮಧುಬಾಲಾ ಕುಸಿದುಹೋಗ್ತಾಳೆ, ಕೇಸು ಬಿ.ಆರ್ ಚೋಪ್ರ ಪರವಾಗುತ್ತೆ. ಫೈನ್ ಕಟ್ಟಿ ಹೊರಬರುವ ಮಧುಬಾಲಾ ಮನಸ್ಸು ಖಿನ್ನವಾಗುತ್ತೆ.. ಈ ವಿಷಯವಾಗಿ ಇಲ್ಲೀವರೆಗೂ ಎರಡು ಮಾತುಗಳನ್ನ ಬಾಲಿವುಡ್‍ನ ಹಿರಿ ತಲೆಗಳು ಆಡ್ತಾರೆ.. ಬೋಪಾಲ್‍ಗೆ ಹೋದರೆ ದಿಲೀಪ್ ಕುಮಾರ್‍ಗೆ ಮಧುಬಾಲಾ ಜೊತೆ ರೊಮ್ಯಾನ್ಸ್ ಮಾಡೋಕೆ ಅವಕಾಶ ಸಿಗುತ್ತೆ ಅನ್ನೊ ಪ್ಲ್ಯಾನ್‍ನಲ್ಲಿ ನಿರ್ದೇಶಕ ಬಿ.ಆರ್.ಚೋಪ್ರ ಇದ್ದರು ಅನ್ನೊ ಮಾತು ಒಂದು ಕಡೆಯಾದರೆ, ಗ್ವಾಲಿಯರ್ ನಲ್ಲಿ ಶೂಟಿಂಗ್ ಫಿಕ್ಸ್ ಆಗಿತ್ತು ಅಲ್ಲಿ ಡಕಾಯಿತರ ಕಾಟ ಇದ್ದರಿಂದ ಅತಾಉಲ್ಲಾ ಖಾನ್ ಬೇರೆ ಲೊಕೇಶನ್‍ನಲ್ಲಿ ಶೂಟಿಂಗ್ ಮಾಡುವಂತೆ ಹೇಳಿದ್ದರು, ಆದರೆ ನಿರ್ದೇಶಕ ಚೋಪ್ರ ಒಪ್ಪದೆ ಕೋರ್ಟಿಗೆ ಹೋದ್ರು. ನಂತರ ದಿಲೀಪ್ನೀನಿನ್ನು ಸಿನಿಮಾಗಳನ್ನ ಬಿಟ್ಟುಬಿಡು, ನನ್ನನ್ನ ಮದುವೆಯಾಗಿ ಆರಾಮಾಗಿರು ಅಂದಿದ್ದರಂತೆ’. ಆಗ ಮಧು, `ಸರಿ ಆಯ್ತು ಆದ್ರೆ ನನ್ನಪ್ಪನಿಗೆ ನೀನು ಒಂದೇ ಒಂದು ಬಾರಿ ಸಾರಿ ಹೇಳು ಅಂದರಂತೆ’. ಆಗ, ದಿಲೀಪ್ ಸಾಹೇಬ್ರು ಬಿಲ್‍ಕುಲ್ ಆಗೋಲ್ಲ ಅಂದಿದ್ದಕ್ಕೆ, ಮಧು- ದಿಲೀಪ್ ಕುಮಾರ್ ಪ್ರೇಮಕ್ಕೆ ಫುಲ್‍ಸ್ಟಾಪ್ ಬಿತ್ತು ಅಂತಲೂ ಹೇಳ್ತಾರೆ.

ಆಗಿದ್ದನ್ನು ಮರೆತುಬಿಡು ಮುಂದೆ ಹೋಗುವುದ ಮರೆಯದಿರು ಅಂತ ಅಪ್ಪ ಹೇಳಿದ ಮಾತಿಗೆ ಕಿವಿಗೊಟ್ಟು ಮತ್ತೆ ಬಣ್ಣ ಹಚ್ಚಿದ ಮಧುಬಾಲಾಗೆ ಸಿಕ್ಕಿದ್ದು ಚಲ್ತಿ ಕ ನಾಮ್ ಗಾಡಿ ಚಿತ್ರ.. ಅಶೋಕ್ ಕುಮಾರ್, ಅನೂಪ್ ಕುಮಾರ್ ಮತ್ತು ಕಿಶೋರ್ ಕುಮಾರ್ ಜೊತೆ ಈ ಚಿತ್ರದಲ್ಲಿ ಮಧು ಏಕೈಕ ಹೀರೋಯಿನ್.. ಆದ್ರೆ ಆಕೆ ಡ್ಯೂಯೆಟ್ ಹಾಡೋದು ಮಾತ್ರ ಕಿಶೋರ್ ಕುಮಾರ್ ಜೊತೆಗೆ..

ಹೀಗೆ ರಿಯಲ್ ಲೈಫ್‍ನಲ್ಲೂ ಡ್ಯೂಯೆಟ್ ಹಾಡಿಕೊಂಡಿದ್ದ ಈ ಜೋಡಿ 1960 ರ ಸುಮಾರಿಗೆ ಮದುವೆಯನ್ನೂ ಆಗ್ತಾರೆ,, ಕಿಶೋರ್ ಮನೆಯಲ್ಲಿದ್ದ ವಿರೋಧಗಳ ನಡುವೆಯೂ ಈ ಮದುವೆಯೇನೊ ಯಶಸ್ವಿಯಾಗುತ್ತೆ, ಆದರೆ ಮಧುಬಾಲಾ ಕಿಶೋರ್ ಮನೆಗೆ ಕಾಲಿಟ್ಟ ಒಂದೇ ತಿಂಗಳಿಗೆ ತನ್ನ ಬಂಗಲೆಗೆ ವಾಪಸ್ ಬಂದುಬಿಡ್ತಾಳೆ.. ಮತ್ತೆ ಮಡುಗಟ್ಟಿದ ಮೌನ ಮಧು ಮನೆಯಲ್ಲೂ, ಮನದಲ್ಲೂ ಆವರಿಸಿಕೊಳ್ಳುತ್ತೆ. ಮತ್ತದೇ ಬ್ಲ್ಯಾಕ್ ಅಂಡ್ ವೈಟ್ ಬದುಕಿನಲ್ಲಿ ಮಧು ಉಳಿದುಹೋಗುತ್ತಾಳೆ..

ಮಕ್ಕಳು ಹುಟ್ಟಿದಾಗ ಸಾಮಾನ್ಯವಾಗಿ ಮನೆಗಳಲ್ಲಿ ಎಲ್ಲರೂ ಖುಷಿಯಿಂದ ಇದ್ದುಬಿಡ್ತಾರೆ, ಆ ಸಮಯದಲ್ಲಿ ಮನೆಯಲ್ಲಿ ಯಾರಾದ್ರು ದೊಡ್ಡವರಿದ್ರೆ ಆ ಮಕ್ಕಳನ್ನ ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ.. ಮಧುಬಾಲಾ ಹುಟ್ಟಿದಾಗ ಅವರ ಮನೆಯಲ್ಲಿ ಅಂಥ ಹಿರೀಕರು ಯಾರೂ ಇರಲಿಲ್ಲ. ಅವಳನ್ನ ಅಮ್ಮ ಎತ್ತಿ ಮುದ್ದಾಡಿದಳೇ ವಿನಃ, ಹೆಣ್ಣು ಹುಟ್ಟಿದ್ದಕ್ಕೆ ಅಪ್ಪನ ಮುಖ ಸಪ್ಪೆಯಾಗಿಬಿಟ್ಟಿತ್ತು. ಅವತ್ತು ಯಾರಾದರೂ ಆಕೆಯನ್ನ ಸರಿಯಾಗಿ ಗಮನಿಸಿದ್ದಿದ್ರೆ ಮಧು ಇನ್ನೊಂದಷ್ಟು ವರುಷ ನೆಮ್ಮದಿಯಾಗಿ ಬದುಕುತಿದ್ದಳು. ಹೆರಿಗೆಯಾದ ನಂತರ ನಿಟ್ಟುಸಿರು ಬಿಡ್ತಿದ್ದ ಅಮ್ಮನ ಉಸಿರು, ಪುಟ್ಟ ಕಂದಮ್ಮನ ಕೆನ್ನೆಗೆ ತಾಕಿದಾಗಲೆಲ್ಲ ಮಧು ಖಿಲ್ಲನೆ ನಗುತ್ತಿದ್ದಳು. ಆಗಲೂ ಆ ರೋಗ ಅವಳಲ್ಲಿ ಹಸುಳೆಯಾಗೆ ಇತ್ತು.

ಮಧುಬಾಲಾ ಹುಟ್ಟಿದಾಗ, ಆಕೆಯ ಮೈಬಣ್ಣ ನೀಲಿ ಬಣ್ಣವಿರೋದು ಅಪ್ಪ ಅಮ್ಮನ ಅರಿವಿಗೆ ಬರುತ್ತೆ.. ಅದರ ಪರಿಣಾಮ ಮುಂದೊಂದು ದಿನ ಘೋರವಾಗಲಿದೆ ಅನ್ನೊ ಸತ್ಯ ಆಗ ಅವರಿಗೆ ಗೊತ್ತಾಗೋಲ್ಲ.. 1950 ರಲ್ಲಿ ಸಿನಿಮಾವೊಂದಕ್ಕಾಗಿ ಚಿತ್ರೀಕರಣ ಮಾಡುವಾಗ ಮಧು ರಕ್ತವಾಂತಿ ಮಾಡಿಕೊಳ್ತಾಳೆ, ತಕ್ಷಣ ಶೂಟಿಂಗ್ ಪ್ಯಾಕಪ್ ಆಗುತ್ತೆ.. ಹತ್ತಿರದ ದೊಡ್ಡಾಸ್ಪತ್ರೆಗೆ ಹೋದ ಮಧು ನಿರುಮ್ಮಳವಾಗಿ ಮಲಗಿರ್ತಾಳೆ.. ಅದಕ್ಕೆ ಡಾಕ್ಟರ್ ಕೊಡುವ ಹೆಸರು ವೆಂಟಿಕುಲರ್ ಸೆಪ್ಟೆಲ್ ಡಿಫೆಕ್ಟ್, ಅಂದ್ರೆ ಮಧು ಹೃದಯದಲ್ಲಿ ರಂಧ್ರವಿದೆ ಅಂತ ಹೇಳ್ತಾರೆ..

ಮಧು ಮನೆಯ ಪರಿಸ್ಥಿತಿ ಇನ್ನು ಸುಧಾರಿಸಿರಲಿಲ್ಲ, ಆಗಲೇ ಇಂಥ ಆಘಾತ.. ಮಗಳಿಗೆ ರೋಗವಿದೆ ಹಾರ್ಟ್ ಪ್ರಾಬ್ಲಮ್ ಇದೆ ಅಂತ ಗೊತ್ತಾದ್ರೆ ಯಾವ ನಾಯಕ ತಾನೆ ಈಕೆಯೊಂದಿಗೆ ನಟಿಸೋಕೆ ಒಪ್ತಾನೆ, ಯಾವ ನಾಯಕ ತಾನೆ ಡ್ಯೂಯೆಟ್ ಹಾಡೋಕೆ ಮನಸು ಮಾಡ್ತಾನೆ.. ಹೀಗಂದುಕೊಂಡು ಮನೆಯವರು ಜಗತ್ತಿನಿಂದ ಈ ವಿಷಯವನ್ನ ಮುಚ್ಚಿಡ್ತಾರೆ.. ಆದ್ರೆ ಎಷ್ಟು ದಿನ, ಬರೀ ನಾಲ್ಕು ವರ್ಷವಷ್ಟೆ.. ಮದ್ರಾಸ್‍ನಲ್ಲಿ ನಡೀತಿದ್ದ ಬಹುತ್‍ದಿನ್‍ಹುವೆ ಚಿತ್ರದ ಚಿತ್ರೀಕರಣದಲ್ಲಿ ಮಧು ಮತ್ತೆ ರಕ್ತವಾಂತಿ ಮಾಡಿಕೊಳ್ತಾಳೆ, ಈ ಬಾರಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತೆ..
ಆಗ ಭಾರತದಲ್ಲಿ ವೈದ್ಯಕೀಯ ಸವಲತ್ತುಗಳು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‍ಗಾಗಿ ತೆರಳುತ್ತಾಳೆ ಮಧು, ಆಪರೇಶನ್ ಮಾಡಬಹುದು ಆದ್ರೆ ಆಮೇಲೆ ಜೀವಕ್ಕೆ ಗ್ಯಾರಂಟಿ ಇಲ್ಲ, ಸುಮ್ಮನಿದ್ದು ಬಿಡಿ, ರೆಸ್ಟ್ ಮಾಡಿ ನೀವು ಬದುಕೋದು ಇನ್ನೊಂದೆ ವರ್ಷ ಅಂತ ಹೇಳಿ ಹಾಕಿದ್ದ ಗ್ಲೌಸ್ ಬಿಚ್ಚಿ ಕೈತೊಳೆದುಕೊಂಡು ಬಿಡ್ತಾರೆ ಡಾಕ್ಟರ್ಸ್.. ಆದ್ರೆ ಈ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗುವಂತೆ ಒಂಭತ್ತು ವರ್ಷ ಬದುಕುತ್ತಾಳೆ ಮಧು..

1950 ರಿಂದಲೇ ಈ ಖಾಯಿಲೆ ಉಲ್ಬಣಗೊಂಡಿದ್ದರೂ ಸಹ ಯಶಸ್ವಿ ಚಿತ್ರಗಳನ್ನ ಕೊಟ್ಟು, ಅತ್ಯುತ್ತಮ ಪ್ರಶಂಸೆ ಗಳಿಸಿದ್ದ ಮಧು.. ಅದೊಂದು ದಿನ ತನ್ನ ಪುಟ್ಟ ಕಂದನ ಜೊತೆ ಕಣ್ಣಾಮುಚ್ಚಾಲೆ ಆಡ್ತಿರ್ತಾಳೆ,, ಆಟದಲ್ಲಿ ಮಗುವಿನಿಂದ ಬಚ್ಚಿಟ್ಟುಕೊಳ್ಳುವ ಸರದಿ ಬಂದಾಗ ಮನೆಯ ಕಂಬದ ಹಿಂದೆ ಹೋಗಿ ನಿಂತವಳು, ಅಲ್ಲೇ ಕುಸಿದುಬೀಳ್ತಾಳೆ, ನಾಡಿ ಮಿಡಿತವಿಲ್ಲ, ಹೃದಯದ ಬಡಿತವಿಲ್ಲ.. ಮಗು ಅಮ್ಮ ಅಮ್ಮ ಅಂತ ಎಷ್ಟು ಕೂಗಿದರೂ ಕೇಳಿಸಿಕೊಳ್ಳಲಾಗದಷ್ಟು ದೂರ ಪ್ರಯಾಣಕ್ಕೆ ಮಧು ಹೊರಟುಹೋಗಿರ್ತಾಳೆ..

70 ಚಿತ್ರಗಳಲ್ಲಿ ಅಭಿನಯಿಸುವ ಮಧು, ಸೂಪರ್ ಹಿಟ್ ಅಂತ ಕೊಟ್ಟಿದ್ದು ಬರೀ ಹದಿನೈದು ಚಿತ್ರಗಳು.. ಆದ್ರೆ ಇವತ್ತಿಗೂ ಮಧುಬಾಲಾಳನ್ನ ಜನ ನೆನಪಿಸಿಕೊಳ್ಳೋದು ಆಕೆಯ ನಟನೆಗೆ,ಚೆಲುವಿಗೆ ಮತ್ತು ಆ ತುಂಟ ನಗುವಿಗೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top