ವಿಸ್ಮಯಕಾರಿ ‘ಪವಾಡ’ಕ್ಕೆ ಸಾಕ್ಷಿ ಶ್ರೀ ಕೋಟೆ ಮಾರಿಕಾಂಬ ಜಾತ್ರೆ

ಜಾತ್ರೆ, ಉತ್ಸವಗಳು ಈ ನೆಲದ ಸಂಸ್ಕೃತಿ. ಪ್ರತಿ ಊರಿಗೂ ಒಂದೊಂದು ಇತಿಹಾಸ ಇರುವಂತೆ, ಪ್ರತಿ ಊರು, ಗ್ರಾಮದ ಜಾತ್ರೆಗಳಿಗೂ ಒಂದೊಂದು ಕಥೆ, ಇತಿಹಾಸ ಇದೆ. ಜಾತ್ರೆ ಅಂದ ತಕ್ಷಣ ಅದು ಕೇವಲ ಧಾರ್ಮಿಕ ಆಚರಣೆಯಲ್ಲ. ಬದಲಾಗಿ ಈ ಮಣ್ಣಿನ ಜನಪದರ ಸಂಸ್ಕೃತಿಯ ಭಾಗ. ಆಟಗಳೊಂದಿಗೆ ಆರಾಧನೆ. ನೃತ್ಯದೊಂದಿಗೆ ನೈವೇದ್ಯ. ಹೀಗೆ ಅನೇಕ ನಂಬಿಕೆ, ಪವಾಡಗಳೊಂದಿಗೆ ಈ ಜಾತ್ರೆ, ಉತ್ಸವಗಳು ಬೆಸೆದು ಕೊಂಡಿವೆ. ಅಲ್ಲದೆ ಜಾತ್ರೆಗಳು ಕೋಮು ಸಾಮರಸ್ಯದ ಧ್ಯೋತಕವೂ ಹೌದು.
ಜಗತ್ತಿನಲ್ಲಿ ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ರು, ಜಾತ್ರೆಯಲ್ಲಿ ನಡೆಯೋ ಕೆಲವು ಪವಾಡಗಳು ವಿಜ್ಞಾನ ಲೋಕಕ್ಕೆ ಸವಾಲೆಸೆದಿರುವಂತವು. ಜ್ಞಾನದ ಜೊತೆ ಜೊತೆಯಲ್ಲೇ ಧಾರ್ಮಿಕ ನಂಬಿಕೆ, ಸಂಸ್ಕೃತಿ ಆಚಾರ ವಿಚಾರಗಳು ಇಂದಿಗೂ ತನ್ನದೇ ಆದಂತಹ ಸ್ಥಾನ ಪಡೆದಿದೆ.


ಭಾರತ ಒಂದು ಆಧ್ಯಾತ್ಮಕತೆಯ ನೆಲೆಬೀಡು. ಇಲ್ಲಿನ ಜನರ ನಂಬಿಕೆ, ಆಚಾರ ವಿಚಾರಗಳು, ಆರಾಧನೆಗಳಿಗೆ ಎಲ್ಲೆಯೇ ಇಲ್ಲ. ಇಲ್ಲಿ ನಡೆಯೋ ಕೆಲವು ಪವಾಡಗಳನ್ನ ಬೇಧಿಸಲು ಸಂಶೋಧಕರಿಂದಲೇ ಸಾಧ್ಯವಾಗಿಲ್ಲ. ವೈಜ್ಞಾನಿಕ ಯುಗದಲ್ಲೂ ಪವಾಡಗಳು ಹಾಗೂ ವಿಸ್ಮಯಗಳು ಅಚ್ಚರಿಯನ್ನುಂಟು ಮಾಡ್ತಿದೆ. ಅಂತಹದೊಂದು ಪವಾಡಕ್ಕೆ ಸಾಕ್ಷಿಯಾಗಿರೋದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಗ್ರಾಮ..!
ಭದ್ರೆಯ ಒಡಲಿನಲ್ಲಿ ಕಂಗೊಳಿಸೋ ಸದಾ ಹಚ್ಚ ಹಸಿರಿನಿಂದ ಕೂಡಿರುವ ಪ್ರವಾಸೋದ್ಯಮ ತಾಣ ಲಕ್ಕವಳ್ಳಿಯಲ್ಲಿ ಮೇ 14 ಹಾಗೂ 15 ರಂದು ಇತಿಹಾಸ ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆ ಜರುಗಲಿದೆ. 3 ವರ್ಷಕ್ಕೊಮ್ಮೆ (ಈ ಬಾರಿ 5 ವರ್ಷಕ್ಕೆ ನಡೆಯುತ್ತಿರುವುದು) ನಡೆಯೋ ಜಾತ್ರೆಗೆ ಈಗಾಗಲೇ ಸಕಲ ತಯಾರಿಗಳು ಕೂಡ ನಡೆಯುತ್ತಿದೆ. ಕೋಮು ಸಾಮರಸ್ಯಕ್ಕೆ ಹೆಸರಾದ ಈ ಜಾತ್ರೆ ಸುಮಾರು 15 ದಿನಗಳ ಕಾಲ ನಡೆಯುತ್ತೆ. ಇಲ್ಲಿ ಜಾತಿ, ಮತ, ಪಂಥ, ಬೇಧವಿಲ್ಲದೇ ಎಲ್ಲರೂ ಒಟ್ಟಿಗೆ ಸೇರಿ ಜಾತ್ರೆ ಆಚರಿಸೋದೆ ಒಂದು ವಿಶೇಷ. ಈ ಜಾತ್ರೆಯಲ್ಲಿ ನಡೆಯೋ ಒಂದು ವಿಸ್ಮಯಕಾರಿ ಪವಾಡ ಇಂದಿಗೂ ತರ್ಕಕ್ಕೆ ನಿಲುಕದ್ದಾಗಿದೆ.
ಜಾತ್ರೆಯ ಹಿಂದಿದೆ ಇತಿಹಾಸ
ಗ್ರಾಮದೇವತೆ ಕೋಟೆ ಮಾರಿಕಾಂಬ ಜಾತ್ರೆ ಆಚರಣೆಯ ಹಿಂದಿನ ಇತಿಹಾಸ ಎಲ್ಲರಿಗೂ ಗೊತ್ತಿರುವಂತದ್ದು. ಕುಲೀನ ಮನೆತನದ ಈ ತಾಯಿ ಒಬ್ಬ ಯುವಕನನ್ನು ಪ್ರೀತಿಸಿ ಮದುವೆಯಾಗ್ತಾಳೆ. ಆದ್ರೆ ಆ ತಾಯಿ ಮದುವೆಯಾಗಿದ್ದು ಒಬ್ಬ ಕೆಳ ವರ್ಗದ ಯುವಕನನ್ನ ಅನ್ನೋದು ತಿಳಿದಿರೋದಿಲ್ಲ. ಇವರಿಬ್ಬರಿಗೆ ಒಂದು ಮುದ್ದಾದ ಗಂಡು ಮಗು ಜನಿಸುತ್ತೆ. ಈ ಮಗು ಕೂಡ ಬೆಳೆದು ದೊಡ್ಡವನಾಗ್ತಾನೆ. ಒಂದು ದಿನ ಬಾಲಕ ಹೊಂಗೆ ಮರದ ಎಲೆಯಲ್ಲಿ ಚಪ್ಪಲಿ ಹೊಲಿಯೋದನ್ನ ಕರಗತ ಮಾಡಿಕೊಳ್ತಿರ್ತಾನೆ. ಇದನ್ನು ನೋಡಿದ ತಾಯಿ ತನ್ನ ಮಗನ ಬಳಿ ಬಂದು ಇದನ್ನು ಹೇಳಿಕೊಟ್ಟಿದ್ಯಾರು ಎಂದು ಕೇಳ್ದಾಗ, ತನ್ನ ತಂದೆ ಇದೇ ವೃತ್ತಿ ಮಾಡುತ್ತಿರೋದಾಗಿ ಬಾಲಕ ಹೇಳ್ತಾನೆ. ಮಗನ ಮಾತು ಕೇಳಿ ಆವೇಶಗೊಂಡ ದೇವಿ ತನಗೆ ಸುಳ್ಳು ಹೇಳಿ ಮದುವೆಯಾದ ಗಂಡನ ಮೇಲೆ ಕೋಪಾಗ್ನಿಯಂತೆ ಕುದಿಯುತ್ತಾಳೆ.


ಮೋಸದಿಂದ ನನ್ನನ್ನು ಮದುವೆಯಾದ ಗಂಡನನ್ನು ಕೊಲ್ಲಲು ಮಾರಿಯ ರೂಪ ತಾಳುತ್ತಾಳೆ. ಭಯದಿಂದ ಗಂಡ ಕೋಣದ ದೇಹಕ್ಕೂ ಮಗ ಕುರಿಯ ದೇಹಕ್ಕೂ ಸೇರಿಕೊಳ್ಳುತ್ತಾರೆ. ಕೊನೆಗೆ ದೇವಿ ಆ ಎರಡೂ ಪ್ರಾಣಿಯನ್ನು ಬಲಿಪಡೆದುಕೊಳ್ತಾಳೆ ಅನ್ನೋದು ಜಾತ್ರೆಯ ಹಿಂದಿನ ಜನಪದ ಕಥೆ. ಪ್ರತಿ ಗ್ರಾಮದ ಜಾತ್ರೆಗೂ ಈ ಕಥೆಯ ನಂಟಿದೆ. ಅನ್ಯಾಯದ ವಿರುದ್ಧ ದುಷ್ಟ ನಿಗ್ರಹದ ರೂಪವೇ ಗ್ರಾಮದೇವತೆ ಅವತಾರ ಎಂದು ಪರಿಭಾವಿಸಬಹುದಾಗಿದೆ.
ಕೋಮು ಸಾಮರಸ್ಯಕ್ಕೆ ಹೆಸರಾದ ಜಾತ್ರೆ
ಅಂದಹಾಗೆ 3 ವರ್ಷಕ್ಕೊಮ್ಮೆ ನಡಿಯೋ ಈ ಜಾತ್ರೆಯನ್ನು ಸರ್ವಧರ್ಮದವರೂ ಸೇರಿ ಆಚರಣೆ ಮಾಡುತ್ತಾರೆ.. ಹಿಂದೂ, ಮುಸಲ್ಮಾನ ಹಾಗೂ ಕ್ರೈಸ್ತ ಧರ್ಮದ ಮುಖಂಡರು, ಊರಿನ ಎಲ್ಲಾ ಕೋಮಿನ ಸದಸ್ಯರೂ ಲಿಂಗಾಯತ ಸಮುದಾಯದ ಮುಖಂಡನ ಮನೆಯಲ್ಲಿ ಸಭೆ ನಡೆಸಿ, ಜಾತ್ರೆ ನಡೆಸೋ ಬಗ್ಗೆ ತೀರ್ಮಾನ ಕೈಗೊಳ್ತಾರೆ. ಎಲ್ಲರ ಒಪ್ಪಿಗೆ ಪಡೆದ ನಂತ್ರ, ಊರಿನ ಗುಡ್ಡದಲ್ಲಿರೋ ಶ್ರೀ ಕದಲಿ ರಂಗನಾಥನ ಬಳಿ ಅಪ್ಪಣೆಗೆಂದು ಶುಭ ಮುಹೂರ್ತ ನಿಗದಿ ಮಾಡ್ತಾರೆ. ರಂಗನಾಥನಿಗೆ ಬಣ್ಣಬಣ್ಣದ ಹೂಗಳಿಂದ ಅಲಂಕೃತಗೊಳಿಸಿ ಜಾತ್ರೆ ನಡೆಸುವ ಬಗ್ಗೆ ಅಪ್ಪಣೆ ಕೇಳ್ತಾರೆ. ಈ ವೇಳೆ ರಂಗನಾಥನ ಬಲ ಬದಿಯಲ್ಲಿ ಮುಡಿಸಿಟ್ಟ ಹೂ ಕೆಳಗೆ ಬಿದ್ದರೆ ಜಾತ್ರೆಗೆ ಸಮ್ಮತಿ ಕೊಟ್ಟಂತೆ ಅನ್ನೋ ನಂಬಿಕೆ ಇಂದಿಗೂ ರೂಢಿಯಲ್ಲಿದೆ. ಸುಮಾರು 35 ಕೋಮಿನವರು ಒಟ್ಟಾಗಿ ಸಾಮರಸ್ಯ ತೋರಿಸುವುದೇ ಈ ಹಬ್ಬದ ವಿಶೇಷ.

15 ದಿನಗಳು ನಡೆಯುವ ಅದ್ಧೂರಿ ಪೂಜೆ
ಮಾರಿಕಾಂಬ ಜಾತ್ರೆಗೆ ಮುನ್ನುಡಿಯೇ ‘ಭಂಡಾರಬಟ್ಟಲು’ ಪೂಜೆ. ಜಾತ್ರೆ ನಡೆಸುವ ಉದ್ದೇಶದಿಂದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ನೇತೃತ್ವದಲ್ಲಿ, ಗ್ರಾಮದ ಎಲ್ಲಾ ಕೋಮಿನ ಜನರು ದೇವಿಗೆ 101 ಎಡೆ ಇಡುವ ಪದ್ಧತಿ. ಇಲ್ಲಿಂದಲೇ ಗ್ರಾಮದಲ್ಲಿ ಒಂದೊಂದೇ ಕೋಮಿನ ಜಾತ್ರೆ ಆರಂಭವಾಗೋದು. ಇಲ್ಲಿ 35 ಕೋಮಿನ ಜನರಿಗೂ ಒಂದು ದಂಡ (ಕೋಲು) ನೀಡಿ, ಒಂದೊಂದು ಕೋಮಿನ ಮುಖ್ಯಸ್ಥನಿಗೂ ಅವರು ಮಾಡಬೇಕಾದ ಜವಾಬ್ದಾರಿಯನ್ನ ವಹಿಸಲಾಗುತ್ತೆ.
ನಂತರ ಊರಿನ ಆದಿ ಕರ್ನಾಟಕ ಸಮುದಾಯದವರಿಂದ ಜಾತ್ರೆ ನಡೆಸೋ ಬಗ್ಗೆ ‘ಸಾರು’ (ಡಂಗೂರ) ಹೊಡೆಸಲಾಗುತ್ತೆ. ಬ್ರಾಹ್ಮಣ ಸಮುದಾಯದವರಿಂದ ‘ಬ್ರಹ್ಮ’ದೇವರ ಪೂಜೆ ನೆರವೇರಿಸಿದ್ರೆ, ದೇವಿಯ ಪ್ರತಿಮೆ ಕೆತ್ತಲು ಮರ ಗುರುತಿಸುವಿಕೆಯನ್ನ ಶೈವರೆಡ್ಡಿ ಸಮುದಾಯದವರು ಮಾಡ್ತಾರೆ. ಶೈವರೆಡ್ಡಿಯವರು ಗುರುತಿಸಿದ್ದ ಮರವನ್ನು ಆದಿಕರ್ನಾಟಕದ ಜನರು ಕಡಿದು ಬರ್ತಾರೆ. ಇತ್ತ ಮಾರಿ ಜಾತ್ರೆಗೂ ಮುನ್ನ ಕ್ಷತ್ರಿಯ ಮರಾಠ ಸಮುದಾಯದಿಂದ ಜಟ್ಟಿಗಪ್ಪ ದೇವರ ಜಾತ್ರೆ, ತಮಿಳು, ಭೋವಿ ಸಮುದಾಯದವರಿಂದ ತಾಯಿದ ಗದ್ದುಗೆಗೆ ‘ಚಪ್ಪರ ಹಾಕುವ ಕಾರ್ಯ’, ಕುರುಬ ಸಮುದಾಯದವರಿಂದ ‘ದೊಣ್ಣೆ ಕೆಂಚಮ್ಮ’ನ ಜಾತ್ರೆ, ಒಕ್ಕಲಿಗ ಸಮುದಾಯದವರಿಂದ ‘ದುರ್ಗಾ ಪರಮೇಶ್ವರಿ’ ಜಾತ್ರೆ. ಭೋವಿ ಸಮುದಾಯದವರು ‘ಗಂಗಮ್ಮ ಜಾತ್ರೆ’, ದೇವಾಂಗ ಸಮುದಾಯದವರಿಂದ ‘ಅಂತರಘಟ್ಟಮ್ಮ ಜಾತ್ರೆ’ ಸೇರಿದಂತೆ ವಿವಿಧ ಕೋಮಿನ ಜನರು ಅವರ ಕುಲದೇವತೆಯ ಆರಾಧನೆ ಮಾಡ್ತಾರೆ.
ಇತ್ತ ದೇವಿಯ ಪ್ರತಿಮೆಯನ್ನು ತಯಾರಿಸುವ ಮರವನ್ನು ಭೋವಿ ಸಮಾಜದ ಮುಖಂಡರ ನೇತೃತ್ವದಲ್ಲಿ ಇಡೀ ಊರಿನ ಜನರು ರಾಜಮೆರವಣಿಗೆ ಮೂಲಕ ವಿಜೃಂಭಣೆಯಿಂದ ಬರ ಮಾಡಿಕೊಳ್ತಾರೆ. ಇನ್ನು ಜಾತ್ರೆ ನಿಗದಿಪಡಿಸಿರೋ ಅವದಿಯೊಳಗಾಗಿ ದೇವಿಯ ವಿಗ್ರಹವನ್ನು ಕೆತ್ತಲಾಗುತ್ತೆ.

ದೃಷ್ಠಿಬೊಟ್ಟಿನ ವೇಳೆ ನಡೆಯುತ್ತೆ ಪವಾಡ
ಇದೇ ತಿಂಗಳ ಮೇ 14 ಹಾಗೂ 15 ರಂದು ನಡೆಯೋ ಜಾತ್ರೆಯ ಕೇಂದ್ರಬಿಂದು ‘ದೃಷ್ಟಿಬೊಟ್ಟು’ ಕಾರ್ಯಕ್ರಮ. ಮೇ 14 ರಂದು ನಡೆಯೋ ಈ ವಿಸ್ಮಯಕಾರಿ ಪವಾಡ ನೋಡಲು ದೂರದ ಹತ್ತಾರು ಗ್ರಾಮದ ಸಾವಿರಾರು ಜನರು ದೇವಿಯ ಗದ್ದುಗೆಯ ಬಳಿ ಬರ್ತಾರೆ. ಇಲ್ಲಿ ನಡೆಯೋ ಪವಾಡ ಇಂದಿಗೂ ಕೂಡ ಬೇಧಿಸಲಾಗಿಲ್ಲ. ಅದುವೇ ತನ್ನಷ್ಟಕ್ಕೆ ತಾನೆ ಹುಲ್ಲಿನ ಬಣವೆಗೆ ಬೆಂಕಿ ಹತ್ತಿಕೊಳ್ಳೋದು.

marikamba-drushti-bottu


ಹೌದು.. ಅಮ್ಮನ ಪ್ರತಿಮೆಯನ್ನು ಕೆತ್ತಿ ಅದಕ್ಕೆ ಅಂದವಾದ ರೂಪ ಕೊಟ್ಟು, ತಾಯಿಗೆ ಇಡುವ ದೃಷ್ಟಿಬೊಟ್ಟಿನ ಸಮಯದಲ್ಲೇ ಇಂತಹ ಪವಾಡವೊಂದು ನಡೆಯೋದು. ದೇವಿಯ ಮುಂಭಾಗದ ಸುಮಾರು 100 ಮೀಟರ್ ದೂರದಲ್ಲಿ ಶಾಸ್ತ್ರಾನುಸಾರವಾಗಿ ಒಂದು ಕಲ್ಲನ್ನು ಪ್ರತಿಷ್ಠಾಪಿಸಲ್ಪಟ್ಟಿರುತ್ತದೆ. ಈ ಕಲ್ಲಿನ ಬಳಿ ಐದಾರು ಹುಲ್ಲಿನ ಸೂಡು (ಬಣವೆ) ಇಟ್ಟಿರಲಾಗುತ್ತೆ. ಎಲ್ಲಾ ರೀತಿಯ ಶಾಸ್ತ್ರಗಳನ್ನು ಮುಗಿದ ಬಳಿಕ ದೇವಿಯ ಮುಂಭಾಗದಲ್ಲಿ ಮುಚ್ಚಲ್ಪಟ್ಟ ಪರದೆಯನ್ನು ತೆರೆದು ದೃಷ್ಠಿಬೊಟ್ಟು ಇಡಲಾಗುತ್ತೆ. ತಾಯಿಗೆ ದೃಷ್ಠಿಯಿಟ್ಟ ಕೆಲವೇ ಸೆಕೆಂಡ್ ಗಳಲ್ಲಿ ಎದುರಿದ್ದ ಹುಲ್ಲಿನ ಬಣವೆ ಧಗಧಗನೆ ಹೊತ್ತಿ ಹುರಿಯಲು ಆರಂಭಿಸುತ್ತೆ. ಈ ವಿಸ್ಮಯಕಾರಿ ಪವಾಡವನ್ನು ಕಣ್ತುಂಬಿಕೊಳ್ಳುವ ಸಾವಿರಾರು ಭಕ್ತರು, ಭಸ್ಮ ಪ್ರಸಾದಕ್ಕಾಗಿ ಬೆಂಕಿಯ ಬಳಿ ಕುಣಿದು ಕುಪ್ಪಳಿಸ್ತಾರೆ. ಕೋಟೆ ಮಾರಿ ನಿನ್ನ ಪಾದಕ್ಕೆ ಉಧೋ.. ಉಧೋ.. ಎಂದು ಘೋಷಣೆ ಹಾಕ್ತಾರೆ. 2 ದಿನಗಳ ನಡೆಯೋ ಈ ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ದೂರದೂರಿನಿಂದ ಭಕ್ತರು, ಬಂಧುಗಳು, ನೆಂಟರಸ್ಥರು ಬಂದು ದೇವಿಯ ದರ್ಶನ ಪಡೆದು ಹರಕೆ ತೀರಿಸ್ತಾರೆ. ಈ ಜಾತ್ರೆಯ ಅಂಗವಾಗಿ ನಡೆಯೋ ಹಳ್ಳಿಯ ಸೊಗಡಿನ ಕುಸ್ತಿ ಪಂದ್ಯಾವಳಿ ಹಾಗೂ ಟಗರು ಕಾಳಗ ಮುಂತಾದ ಜನಪದ ಆಟಗಳು ಜಾತ್ರೆಗೆ ಇನ್ನಷ್ಟು ಕಳೆ ಕಟ್ಟಿಕೊಡುತ್ತವೆ.
ಒಟ್ಟಿನಲ್ಲಿ ಜಾಗತೀಕರಣದ ಭರಾಟೆಯಲ್ಲಿಯೂ ಇಂತಹ ಜಾತ್ರೆಗಳು ತಮ್ಮತನ ಉಳಿಸಿಕೊಂಡಿವೆ. ಅಲ್ಲದೆ ಮುಂದಿನ ಪೀಳಿಗೆಗೂ ಇವುಗಳನ್ನು ಉಳಿಸಿ, ಬೆಳಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.
✍️ ಪ್ರಮೋದ್ ಲಕ್ಕವಳ್ಳಿ, ಚಿಕ್ಕಮಗಳೂರು

ಪ್ರಮೋದ್ ಲಕ್ಕವಳ್ಳಿ, ಚಿಕ್ಕಮಗಳೂರು
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top