ಕೃಷಿಯನ್ನು ದೂರವಿರಿಸಿದ ಬಂಡವಾಳಶಾಹಿ ರಾಜಕೀಯ

ಭಾರತ ಕೃಷಿ ಪ್ರಧಾನ ರಾಷ್ಟ್ರವೆಂದು, ರೈತನನ್ನು ದೇಶದ ಬೆನ್ನೆಲುಬೆಂದು ಕರೆಯುತ್ತಿದ್ದೇವೆ ಜೊತೆಗೆ ಕೃಷಿ ಬದುಕು ಸುಖ ನೀಡುವುದಿಲ್ಲ. ಬೆಳೆದ, ಬೆಳೆಗೆ ಬೆಲೆಯಿಲ್ಲ. ಕೃಷಿ ಭೂಮಿಯಲ್ಲಿ ದುಡಿಯು ಕೂಲಿ ಆಳುಗಳಿಲ್ಲ, ವಿದೇಶಿ ಮಾರುಕಟ್ಟೆಗಳಲ್ಲಿ ಬೇಡಿಕೆಗಳಿಲ್ಲ ಎಂಬ ಬಲವಾದ ಕೂಗು ಕೃಷಿ ವಲಯದಿಂದ ಕೇಳಿಬರುತ್ತಿದೆ. ರೈತರ ಆತ್ಮಹತ್ಯೆ, ವಲಸೆ, ಬರಗಳ ನಡುವೆ ಕೈಗಾರಿಕೆಯ ಬೆಳವಣಿಗೆಯೇ ದೇಶದ ಅಭಿವೃದ್ಧಿ ಎಂಬ ವಿಜೃಂಭಣೆಯು ಈ ಕೂಗಿಗೆ ಬೆಂಬಲವೆಂಬಂತೆ ನಿಂತಿದೆ. ಸರ್ಕಾರಗಳು ಬೆಂಬಲ ಬೆಲೆ, ಸಾಲಮನ್ನಾ, ಕೃಷಿ ಮಾರುಕಟ್ಟೆಯ ವಿಸ್ತರಣೆ ಇತ್ಯಾದಿ ಯೋಜನೆಗಳನ್ನು ರೂಪಿಸುತ್ತಿದ್ದರು. ಕೃಷಿ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವ ಅಂಚಿನಲ್ಲಿದೆ ಎಂಬುವುದು ನಮ್ಮ ಮುಂದಿರುವ ಸತ್ಯ ಕೃಷಿಯು ತನ್ನ ಸತ್ವವನ್ನು ಕಳೆದುಕೊಳ್ಳಲು ಪ್ರಭುತ್ವದ ಕೈಗಾರಿಕಾ ಪ್ರಧಾನ ಧೋರಣೆ ಮತ್ತು ಒಲವುಗಳೇ ಕಾರಣವಾಗಿದೆ.
ಕೃಷಿಯನ್ನು ಮನುಷ್ಯ ತನ್ನ ಬದುಕಿನ ಭಾಗವಾಗಿಸಿಕೊಂಡ ಮೇಲೆ ಪರಿಪೂರ್ಣ ಮನುಷ್ಯನಾದ. ಕೃಷಿ ಚಟುವಟಿಕೆಯು ಆಹಾರವನ್ನು ಒದಗಿಸಿದ್ದಲ್ಲದೆ ಜೀವನ ಕ್ರಮವನ್ನು, ಜ್ಞಾನಪರಂಪರೆಯನ್ನು ಹುಟ್ಟುಹಾಕಿತು. ಇದನ್ನು ಚಿಂತಕರು ಸಂಸ್ಕ್ರತಿ ಎಂದರು. ಕೃಷಿ ಮತ್ತು ಮನುಷ್ಯನ ಸಂಬಂಧ ಪ್ರಾಚೀನವಾದದ್ದು. ಈ ಕೃಷಿಯೊಂದಿಗೆ ಹುಟ್ಟು, ಸಾವು, ನೋವು, ನಲಿವು ಸಂಕಟ, ದೈವ, ನಂಬಿಕೆ, ಆಚರಣೆ, ಹಾಡು, ಹಬ್ಬಗಳು ಜೀವಪಡೆದವಲ್ಲದೆ ಮನುಷ್ಯನನ್ನು ಸ್ವಾವಲಂಬಿಯಾಗಿ, ಚೈತನ್ಯಶೀಲನಾಗಿ ಬದುಕಿಸಿದ್ದವು. ಸಾಮ್ರಾಜ್ಯಗಳು ಮೆರೆಯಲು, ನಗರ ಕಟ್ಟಡಗಳು ಜೀವ ಪಡೆಯಲು. ದೇವಸ್ಥಾನ, ದೇವರು, ದೈವಗಳು ಇರುವಿಕೆಯ ಲೋಕವನ್ನು ಪಡೆಯಲು ತೆರೆಮರೆಯಲ್ಲಿ ಅಡಿಪಾಯವಾಗಿದ್ದದ್ದು ಕೃಷಿ ಮತ್ತು ಕೃಷಿಕರು. ಕೃಷಿಯ ಬಗೆಗಿನ ಜ್ಞಾನಪರಂಪರೆಯು ವಂಶಪರಂಪರೆಯ ನೆಲೆಯಿಂದ ರಕ್ತಗತವಾಗಿತ್ತಲ್ಲದೆ. ವೇದಸಾಹಿತ್ಯ ಮತ್ತು ಪ್ರಾಚೀನ ಶಿಕ್ಷಣವು ಉಳಿಸಿಕೊಂಡು ನಡೆಸಿಕೊಂಡು ಬಂದಿತ್ತು. ಆದರೆ ಮಧ್ಯಕಾಲೀನ ವಿದೇಶಿಯ ದಾಳಿಗಳು ಮತ್ತು ಆಧುನಿಕ ವಸಾಹತುಶಾಹಿಯ ಪ್ರವೇಶವು ಕೃಷಿಯ ಜೊತೆಗಿದ್ದ ಮಾನವನ ಸಂಬಂಧವನ್ನು ಪಲ್ಲಟಿಸಿತು. 1854ರಲ್ಲಿ ಆಂಗ್ಲ ಮಾದರಿಯ ಶಿಕ್ಷಣವು ನಮ್ಮ ದೇಶದಲ್ಲಿ ಕೈಗಾರಿಕಾ ಮತ್ತು ಆಡಳಿತ್ಮಾಕ ಮೀಮಾಂಸೆಗೆ ಸಂಬಂಧಿಸಿದ ಜ್ಞಾನವು ಪಠ್ಯದ ಮೂಲಕ ನಮ್ಮ ನೆಲವನ್ನು ಪ್ರವೇಶ ಪಡೆಯಿತು. ಈ ಪ್ರವೇಶವು ನಮ್ಮ ಶಿಕ್ಷಣ ಮಾದರಿಯನ್ನು, ಕೃಷಿಯನ್ನು ಅದರ ಉತ್ಪನ್ನವನ್ನು ಹಾಗೂ ಆಚಾರ, ನಂಬಿಕೆ, ದೇವರು, ದೈವ, ಜೀವನ ಮೀಮಾಂಸೆಯನ್ನು ಕೀಳೆಂದು, ಐತಿಹ್ಯವೆಂದು, ಪುರಾಣವೆಂದು ಕೃಷಿಯ ಸ್ಥಾನವನ್ನು ಕುಗ್ಗಿಸಿ, ಪಲ್ಲಟಿಸುವಂತೆ ಮಾಡಿತಲ್ಲದೆ ವಿಜ್ಞಾನ ಮತ್ತು ಕೈಗಾರಿಕಾ ಜ್ಞಾನಪರಂಪರೆಯನ್ನು ಅಭಿವೃದ್ಧಿಯ ಸಾಧನಗಳೆಂದು, ಜ್ಞಾನಧಾರೆಗಳೆಂದು ಪ್ರಭುತ್ವದ ನೆಲೆಯಲ್ಲಿ ಪರಿಚಯಿಸುವ ಮೂಲಕ ಕೃಷಿಯೊಂದಿಗೆ ಸ್ವಾವಲಂಬಿಯಾಗಿದ್ದ ಮನುಷ್ಯನನ್ನು ಕೈಗಾರಿಕೆಯ ಕಡೆಗೆ ಪ್ರವೇಶಿಸುವಂತೆ ಮಾಡಿ ಪರವಲಂಬಿಯನ್ನಾಗಿಸಿತು.

ಮನುಷ್ಯನೊಂದಿಗೆ ಗೌರವದ ಧಾರೆಯಲ್ಲಿ ಸಂಬಂಧವನ್ನು ಪಡೆದುಕೊಂಡಿದ್ದ ಕೃಷಿ ಪರಿಕರಗಳಾದ ನೇಗಿಲು, ನೊಗ, ಕುಂಟೆ, ಕೂರಿಗೆ, ತಟ್ಟಿ, ಬಟ್ಟಿ, ಕತ್ತಿ, ಹಾರೆ, ಕುಂಟಾಣಿ, ಪಿಕ್ಕಾಸಿ, ಮುಟ್ಟಾಳೆ, ಸೇರು, ಪಾವು, ಏಣಿ, ದೋಣಿ, ಏತ, ಒನಕೆ ಮತ್ತು ಬಿತ್ತನೆ ಬೀಜಗಳು ನಿಧಾನಕ್ಕೆ ತನ್ನ ಅಸ್ಥಿತ್ವವನ್ನು ಕಳೆದುಕೊಂಡು ಅನಾಥವಾಗಿ ಬೆಂಕಿ ಮತ್ತು ಗೆದ್ದಲುವಿನ ಆಹಾರವಾದವು. ಇವುಗಳ ಸ್ಥಾನವನ್ನು ಕೈಗಾರಿಕಾ ಯಂತ್ರ-ಉಪಕರಣಗಳು ಆಧುನಿಕ ಕೃಷಿ ಪದ್ಧತಿಯ ಭಾಗವಾಗಿ ತುಂಬಿದವು. ಸ್ವಾತಂತ್ರ್ಯ ಭಾರತದ ನಂತರ ಕೃಷಿಯನ್ನು ಕೈಗಾರಿಕೆಯ ಅಡಿಯಾಳಾಗಿಸುವ ಕಾರ್ಯ ತೀವ್ರವಾಗಿ ನಡೆಯಿತು. ಸರ್ಕಾರಗಳು ಹಸಿರು ಕ್ರಾಂತಿ, ಹಳದಿಕ್ರಾಂತಿ, ನೀಲಿಕ್ರಾಂತಿ, ಶ್ವೇತಕ್ರಾಂತಿಯೆಂಬ ಪರಿಕಲ್ಪನೆಯ ಮೂಲಕ ಬಂಡವಾಳ ಕೇಂದ್ರಿತ ಅಭಿವೃದ್ಧಿಯ ಬೀಜವನ್ನು ರೈತರ ಹೆಗಲಿಗಿಟ್ಟು ಬಿತ್ತಿದರು. ಹಾಗೂ ವಿಷಗೊಬ್ಬರ, ರೀಯಾಯಿತಿ, ಕೃಷಿಮಾರುಕಟ್ಟೆ, ಜಾಗತೀಕರಣದಂತಹ ಅಸ್ತ್ರವನ್ನು ರೈತರ ಮೇಲೆ ಪ್ರಾಯೋಗಿಸಿ ಕೃಷಿಯನ್ನು, ಕೃಷಿಪರಂಪರೆಯನ್ನು ಬೆತ್ತಲಾಗಿಸಿ ಬಯಲಿನಲ್ಲಿ ನಿಲ್ಲಿಸಿ. ಕೃಷಿಯ ಮಾನ ಉಳಿಸಲು ಕೈಗಾರಿಕೆಗಳಿಗೆ ಗುತ್ತಿಗೆ ನೀಡಿರುವುದು ಸರ್ಕಾರಗಳ ಸಾಧನೆಯಾಗಿದೆ.


ನಮ್ಮ ಶಿಕ್ಷಣದ ಪಠ್ಯಗಳು ಇಂದು ಕೃಷಿ ಜ್ಞಾನ ಪರಂಪರೆಯನ್ನು ಜ್ಞಾನವೆಂದು ಒಪ್ಪಿಕೊಳ್ಳದೆ ದೂರವಿಟ್ಟು. ಬಂಡವಾಳ ಕೇಂದ್ರಿತ ಮತ್ತು ಆಡಳಿತ ಕೇಂದ್ರಿತ ಜ್ಞಾನವನ್ನು ಅಪ್ಪಿಕೊಂಡವು. ಈ ಪರಿಣಾಮದಿಂದ ನಾವು ವಿಜ್ಞಾನವನ್ನು, ತಾಂತ್ರಿಕಜ್ಞಾನವನ್ನು, ಗಣಿತವನ್ನು, ವೈದ್ಯಕಿಯವನ್ನು ಉನ್ನತ ಜ್ಞಾನಮೀಮಾಂಸೆಗಳೆಂದು ಓದುತ್ತಿದ್ದೇವೆ. ಈ ರೀತಿಯ ಶಿಕ್ಷಣ ಪ್ರಜ್ಞೆಯು ನಮ್ಮನ್ನು ಯಾಂತ್ರಿಕವಾದ ಸತ್ವರಹಿತ ಜೀವಿಯಾಗಿ ಮಾಡಿದೆ. ಇಂದು ಶಿಕ್ಷಣದ ಮೂಲಕ ಪದವಿ ಪಡೆದ ವ್ಯಕ್ತಿಗಳಿಗೆ ಕೃಷಿ ಮತ್ತು ಅದರ ಪರಿಸರವು ಯಾವ ಆಕರ್ಷಣೆಯನ್ನು ಮೂಡಿಸುತ್ತಿಲ್ಲ ಮತ್ತು ಕೃಷಿ ಕ್ಷೇತ್ರಕ್ಕೆ ತನ್ನನ್ನು ಒಳಗೊಳ್ಳುವಂತೆಯು ಮಾಡುತ್ತಿಲ್ಲ ಕಾರಣ ಕೃಷಿ ಪರಂಪರೆಗೆ ಸಂಬಂಧಿಸಿದ ಜೀವನ ವಿಧಾನವನ್ನು ಮತ್ತು ಕೃಷಿ ಮೀಮಾಂಸೆಯನ್ನು ಪಠ್ಯದ ಭಾಗವಾಗಿ ಮಗುವಿಗೆ ಕಲಿಸುತ್ತಿಲ್ಲ. ಹೀಗಿರುವ ಪರಿಸ್ಥಿಯಲ್ಲಿ ಸರ್ಕಾರಗಳು ರೈತರನ್ನು ಅವರ ಬದುಕನ್ನು ಕಟ್ಟಲು ಸಾಲಮನ್ನಾ ಇತರೆ ಕೃಷಿ ಸಂಬಂಧಿತ ಯೋಜನೆಯನ್ನು ರೂಪಿಸಿ ರೈತರ ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಮೊದಲು ಕೃಷಿ ಪರಂಪರೆಯನ್ನು ಶಿಕ್ಷಣದ ಭಾಗವಾಗಿಸಿ ಕಲಿಸುವ ಮೂಲಕ ಕೈಗಾರಿಕಾ ಗುಲಾಮಗಿರಿಯಿಂದ ಮುಕ್ತವಾಗಿಸಿದಾಗ ನಮ್ಮ ಜೀವಂತಿಗೆಯ ಹೆಜ್ಜೆಗಳು ಕೃಷಿ ಸಂಸ್ಕ್ರತಿಯೊಂದಿಗೆ ಜನ್ಮ ಪಡೆಯಬಹುದು ಮತ್ತು ಅನ್ನ, ಅಕ್ಷರಗಳು ನಮ್ಮೊಂದಿಗೆ ಅಪ್ಪಿಕೊಳ್ಳಬಹುದು.


✍️ ಸುಬ್ರಹ್ಮಣ್ಯ ಸಿ
ಕನ್ನಡ ಪ್ರಾಧ್ಯಾಪಕರು
ಬಿಜಿಎಸ್ ಪದವಿ ಕಾಲೇಜು. ಕಾವೂರು
ದ.ಕ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top