ನೋಡೋಕೆ ಶ್ರೀಮಂತ ಮಹಿಳೆ | ಬೀದಿಯೇ ಇವರ ಆಫೀಸ್

ಪಟಪಟ ಇಂಗ್ಲಿಷ್ ಮಾತಾಡೋ ಆಕೆಗೆ ಬೀದಿಯೇ ಆಫೀಸ್….!
ಆಕೆ ಪಟಪಟ ಅಂತ ಇಂಗ್ಲಿಷ್ ಮಾತಾಡ್ತಾರೆ, ಹಿಂದಿಯೂ ಗೊತ್ತಿದೆ , ಅಪ್ಪಟ ಕನ್ನಡತಿಯೂ ಹೌದು, ತುಂಬಾ ಬುದ್ಧಿವಂತೆ. ಆದರೆ, ಬೀದಿಯೇ ಇವರ ಆಫೀಸ್…!

ನಿನ್ನೆ ಸಂಜೆ ನನ್ನ ಗೆಳೆಯನನ್ನು ಭೇಟಿ ಮಾಡೋಕೆ ಆರ್ ಟಿ ನಗರಕ್ಕೆ ಹೋಗಿದ್ದೆ. ನಂಗೆ ಸ್ವಲ್ಪ ದುಡ್ಡು ಬೇಕಿತ್ತು. ಸ್ಯಾಲರಿ ಬೇರೆ ಆಗಿಲ್ಲ..! ಆ ನನ್ನ ಗೆಳೆಯ ಎಟಿಎಂ ನಿಂದ ಹಣ ಡ್ರಾ ಮಾಡಿಕೊಡ್ತೀನಿ ಅಂದ. ಸರಿ ಅಂತ ಪೊಲೀಸ್ ಸ್ಟೇಷನ್ ಹತ್ತಿರ , ಡೊಮಿನೋಸ್ ಪಕ್ಕದಲ್ಲಿ ಬೈಕ್ ಪಾರ್ಕ್ ಮಾಡಿ ಎಟಿಎಂ ಹುಡ್ಕೊಂಡು ಮಾತಾಡ್ತಾ ನಡೆದುಕೊಂಡು‌ ಹೋದ್ವಿ. ಎಸ್ ಬಿಐ ಎಟಿಂ ನಿಂದ ಗೆಳೆಯ ಹಣ ಡ್ರಾ ಮಾಡಿಕೊಟ್ಟ.‌
ವಾಪಸ್ಸು ಬರ್ತಾ ಇರುವಾಗ ಆರ್.ಟಿ. ನಗರ ಗ್ರಂಥಾಲಯ ಹತ್ತಿರ,  ಬ್ರಾಹ್ಮಿನ್ಸ್ ತಟ್ಟೆ ಇಡ್ಲಿ ಹೋಟೆಲ್ ಮುಂದುಗಡೆ ಒಬ್ಬಾಕೆ ಹೋಗೋ-ಬರೋರನ್ನು ಅಡ್ಡ ಗಟ್ಟಿ ಕಡ್ಲೆ , ಚಿಪ್ಸ್, ಲೇಸಿನ ಪ್ಯಾಕ್ ಮಾರ್ತಿದ್ರು.‌ ಎಲ್ಲರಂತೆ ನಮ್ಮನ್ನು ಕೂಡ ತಗೋಳಿ ಒಂದಕ್ಕೆ 10 ರೂ ಮಾತ್ರ ಅಂತ ಇಂಗ್ಲಿಷ್‌ ನಲ್ಲಿ ಹೇಳಿದ್ರು. ನಾವು ಸೀರಿಯಸ್ ಆಗಿ ಏನೋ ಮಾತಾಡ್ತಾ ಇದ್ದಿದ್ರಿಂದ ಆ ಕಡೆ ಗಮನ ಕೊಡ್ಲಿಲ್ಲ. ಸ್ವಲ್ಪ ದೂರ ಹಾಗೇ ನಡ್ಕೊಂಡು ಬಂದ್ವಿ. ಇದ್ದಕ್ಕಿದ್ದಂತೆ ಗೆಳೆಯ ಟಾಪಿಕ್ ಚೇಂಜ್‌ ಮಾಡ್ದ.‌’ಹೇ ಒಂದ್ ನಿಮಿಷ, ಅಲ್ಲಿ ಚಿಪ್ಸ್ ,‌ಕಡ್ಲೆ ಮಾರ್ತಾ ಇರೋರು ತುಂಬಾ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್ ಅ‌ನಿಸ್ತಾರೆ. ಟು ಡೇಸ್ ಬ್ಯಾಕ್ ಕೂಡ ಇಲ್ಲೇ ಇವರನ್ನು ನೋಡಿದ್ದೆ ಅಂದ.
ಸರಿ ಬಾ ಹೋಗಿ,‌ ಮಾತಾಡ್ಸಣ ಅಂದೆ. ಎರಡು ಪ್ಯಾಕ್ ಕಡ್ಲೆ ತಗೊಂಡು ಮಾತಿಗಿಳಿದ್ವಿ. ತುಂಬಾ ಚೆನ್ನಾಗಿ ಇಂಗ್ಲಿಷ್ ಮಾತಾಡ್ತಾ ಇದ್ರು. ನಾವು ಕನ್ನಡ ಬರುತ್ತಾ ಮೇಡಂ ಅಂತ ಕೇಳಿದ್ವಿ. ಅಯ್ಯೋ ನಾನು ಕನ್ನಡದವಳೇ ಮೈಸೂರು ನಮ್ಮೂರು ಅಂತ ನಮ್ ಜೊತೆ ಮಾತು ಶುರುಮಾಡಿದ್ರು.


ಅವರ ಹೆಸರು ರೇಖಾ. ಹೆಚ್ಚು ಕಮ್ಮಿ 45-50 ವರ್ಷ ಆಗಿರ್ಬಹುದು. ಏಜೆಷ್ಟು ಅಂತ ಕೇಳಿದ್ರೆ, ಕ್ಷಮಿಸಿ ಏಜ್ ಮಾತ್ರ ಹೇಳಲ್ಲ… ಏಜ್ ಹೇಳಿದ್ರೆ ವೀಕ್ ಆಗಿದ್ದೀನಿ ಅಂತ ನಂಗೆ ಅನ್ಸುತ್ತೆ ಅಂದ್ರು. ಬೇಡ ಅಂತ ಸುಮ್ನಾದ್ವಿ.
ಇವರ ತಂದೆ ಕೆ.ವಿ.ಎಲ್ ಅಯ್ಯರ್ .‌ ಒಳ್ಳೇ ಜಾಬ್ ನಲ್ಲಿ ಇದ್ದವರು. ಮನೆಕಡೆ ಬೇಕಾದಷ್ಟು ಇತ್ತಂತೆ. ಈಗ ತಂದೆ ಇಲ್ಲ. ತಾಯಿ ಹಾಸಿಗೆ ಹಿಡಿದಿದ್ದಾರೆ.
ರೇಖಾ ಅವರು ಒಟ್ಟು ನಾಲ್ಕು ಜ‌ನ ಅಕ್ಕ-ತಂಗೀರು. ರೇಖಾ ಎರಡನೇ ಅವರಂತೆ. ಉಳಿದ ಮೂವರು ಮದ್ವೆ ಆಗಿದ್ದಾರೆ. ಆದ್ರೆ ರೇಖಾ ಮದ್ವೆ ಆಗಿಲ್ಲ.
ಬಿಕಾಂ ಪದವೀಧರೆ, ಬೇರೆ ಬೇರೆ ಕೆಲಸ ಮಾಡಿದ್ದಾರಂತೆ, ಈಗ ಆರ್ ಟಿ ನಗರದಲ್ಲಿದ್ದಾರೆ. ಅಮ್ಮ ಇನ್ನೋರ್ವ ಸಹೋದರಿ ಜೊತೆ ಇದ್ದಾರೆ. ಆಗಾಗ ಅಮ್ಮನ ನೋಡ್ಕೊಂಡು ಬರ್ತಾರೆ.
ಇವರು ಒಂಟಿಯಾಗಿ ಆರ್ ಟಿ ನಗರದಲ್ಲಿದ್ದಾರಂತೆ. ತುಂಬಾ ಸಲ ಕಳ್ಳತನ ಆಗಿದೆಯಂತೆ. ಒಮ್ಮೆ ಕಳ್ಳತನ ಆದಾಗ ಕಂಪ್ಲೇಂಟ್ ಕೊಟ್ಟ ಸ್ವಲ್ಪ ದಿವಸದಲ್ಲೇ ಅಪ್ಪ ತೀರ್ಕೊಂಡಿದ್ರಿಂದ ಈಗೀಗ ಕಂಪ್ಲೇಂಟ್ ಕೊಡೋಕು ಹೆದರುತ್ತಿದ್ದೀನಿ ಅಂತಾರೆ! ಈಗ ಕಂಪ್ಲೀಟ್ ಕೊಟ್ರೆ ಅಮ್ಮನನ್ನೂ ಕಳ್ಕೋ ಬೇಕಾಗುತ್ತೋ ಅನ್ನೋ ಭಯವಂತೆ.

ಏನಾದ್ರು ಮಾಡಿ ದುಡ್ಡು ಮಾಡ್ಬೇಕು, ಕಳ್ಕೊಂಡಿದ್ದೆಲ್ಲಾ ಸಂಪಾದಿಸ್ ಬೇಕು. ಮನೆ ತಗೊಂಡ್ ಮೇಲೆ ಒಳ್ಳೆಯವ್ರು ಸಿಕ್ಕರೆ ಮದ್ವೆ ಆಗೋದು ಅಂತಿದ್ದಾರೆ!
ಬರೀ ಬೀದೀಲಿ ಕಡ್ಲೆ ಮಾರಿ ಮನೆಕೊಳ್ಳೋದು ಹೇಗೆ? ಅನ್ನೋ ಪ್ರಶ್ನೆ ನಮ್ಗೂ ಬಂತು. ಅದಕ್ಕೂ ಆಕೆಯಲ್ಲಿ ಉತ್ತರವಿತ್ತು. ಈ‌ ಕಡ್ಲೆ, ಚಿಪ್ಸ್ ಮಾರೋದು ಮಾತ್ರವಲ್ದೆ ನಾನಾ ರೀತಿಯ ಇನ್ಶುರೆನ್ಸ್ ಕೂಡ ಮಾಡಿಸಿ‌ ಕೊಡ್ತಾರಂತೆ. ರಿಯಲ್ ಎಸ್ಟೇಟ್‌ ಮಾಡ್ತಾರಂತೆ. ಈ ಹಣನೆಲ್ಲಾ ಇಟ್ಕೊಂಡು ಮನೆ ತಗೋತಿನಿ ಅನ್ನೋ ಅವರಿಗೂ ಗೊತ್ತಿದೆ, ತನಗೆ ಮದುವೆ ಆಗೋ ಏಜ್ ಮೀರಿದೆ ಅಂತ.
ಒಬ್ಬ ಮದುವೆ ಆಗ್ತೀನಿ ಅಂತ ಬಂದು ಕೈ ಕೊಟ್ಟು ಹೋಗಿದ್ದನಂತೆ. ಹಿಂದೆ ದೈಹಿಕ, ಮಾನಸಿಕ ಎಲ್ಲಾ ರೀತಿಯ ನೋವು , ಯಾತನೆ ಅನುಭವಿಸಿದ್ದೇನೆ. ಆದರೆ, ನಾನು ಬದುಕಿ ತೋರೀಸ್ತೀನಿ..ಛಲವಿದೆ ಅಂತಾರೆ.
ಹೆಚ್ಚು ಕಮ್ಮಿ ಒಂದು ಗಂಟೆಗಳ ಕಾಲ ನಮ್ಮೊಡನೆ ಮಾತಾಡಿದ್ರು, ಇವರ ಮಾತನ್ನು ಕೇಳ್ತಾ ಹೋದ್ರೆ ಮೆಂಟಲಿ ಡಿಸ್ಟರ್ಬ್ ಆಗಿರಬಹುದು ಅನಿಸುತ್ತೆ. ಬಟ್, ಸ್ವಾಭಿಮಾನದಿಂದ ಬದುಕ ಬೇಕು ಅಂತ ರೋಡ್ ಸೈಡ್ ನಲ್ಲಿ 10 ರೂ ಕಡ್ಲೆ, ಚಿಪ್ಸ್ ಮಾರಾಟ ಮಾಡ್ತಾರಲ್ವಾ ಅದು ನಿಜಕ್ಕೂ ಗ್ರೇಟ್.

ಈ ದಿಟ್ಟ ಮಹಿಳೆಗೆ ನಮ್ಮದೊಂದು ಸಲಾಂ, ನೀವೂ ಆ ಕಡೆ ಹೋದರೆ ಮಾತನಾಡಿಸಿ, ಇನ್ಷುರೆನ್ಸ್ ಏನಾದರೂ ಮಾಡಿಸೋ ಪ್ಲಾನ್ ಇದ್ದರೆ ಅವರ ಬಳಿ ಮಾಡಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top