ಅಮ್ಮ..ನೀನೆಂತ ಅದ್ಭುತ..ನೀನೇ ಎಲ್ಲಾ,ನಿನ್ನಿಂದಲೇ ಎಲ್ಲಾ..

ಅಮ್ಮಾ.. “ನನ್ನ ಬುಕ್ಸ್ ಎಲ್ಲಿವೆ? ಶರ್ಟ್– ಪ್ಯಾಂಟ್ ವಾಶ್ ಮಾಡಿದ್ದೀಯೇನಮ್ಮ? ನನ್ನ ಮೊಬೈಲ್ ಎಲ್ಲಿದೆ? ಇಲ್ಲೇ ಇಟ್ಟಿದ್ದ ಚಾರ್ಜರ್ ಏನಾಯ್ತಮ್ಮ? ಬೈಕ್ ನ ಕೀ ನೋಡಿದ್ಯಾ? ಪರ್ಸ್ ಕಾಣಿಸ್ತಾ ಇಲ್ಲ! ಎಲ್ಲೋಯ್ತಮ್ಮ? ದುಡ್ಡು ಎಲ್ಲಾ ಖಾಲಿಯಾಗಿದೆ, ಸ್ವಲ್ಪ ಖರ್ಚಿಗೆ ಕಾಸು ಇದ್ದೆರೆ ಕೊಡ್ತಿಯೇನಮ್ಮ?” …….ಅಯ್ಯೋ ಒಂದೇ, ಎರಡೇ ದಿನವಿಡೀ ಅಮ್ಮನನ್ನು ಒಂದಲ್ಲಾ ಒಂದು ಕಾರಣಕ್ಕೆ ಪ್ರಶ್ನೆ ಮಾಡುತ್ತಲೇ ಇರುತ್ತೇವೆ. ಅವಳು ಮಾತ್ರ ನಮ್ಮೆಲ್ಲಾ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸುತ್ತಲೇ, ನಾವು ಕೇಳಿದ ವಸ್ತುಗಳನ್ನು ನಮಗೆ ನಗುತ್ತಲೇ ನೀಡುತ್ತಾಳೆ. ಆದರೆ ನಮ್ಮ ಅಪ್ಪನತ್ರ ನಾವು ಕೇಳುವ ಒಂದೇ ಪ್ರಶ್ನೆ “ಅಪ್ಪಾ ಅಮ್ಮ ಎಲ್ಲಿ?”.

ಅಮ್ಮ “ಇಂದು ಚಪಾತಿ-ಚಟ್ನಿ ಬೇಡ, ಪೂರಿ-ಸಾಗು ಮಾಡು, ಚಿತ್ರಾನ್ನ ಬೇಡ, ಫ್ರೈಡ್ ರೈಸ್ ಮಾಡಮ್ಮ, ನೀರು ದೋಸೆ ಬೇಡ, ಮಸಾಲೆ ದೋಸೆ ಹಾಕು. ಇಡ್ಲಿ ಬೇಡಮ್ಮ, ಪಡ್ದು ಮಾಡು, ದಿನಾ ಒಂದೇ ತರಹದ ಊಟ ಮಾಡಿ ಬೇಜಾರಾಗಿದೆ ಹೊಸದಾಗಿ ಏನಾದರು ಮಾಡಮ್ಮ…” ಎಂದು ಅವಳಿಗೆ ಆರ್ಡರ್ ಮಾಡುತ್ತಲೇ ಇರುತ್ತೇವೆ. ಅವಳಿಗೆ ಏನು ಬೇಕೋ, ಅದನ್ನ ಬಿಟ್ಟು, ನಮೆಗೇನು ಬೇಕೋ ಅದನ್ನು ತಕ್ಷಣವೇ ಮಾಡಿಕೊಡೋಳು ನಮ್ಮಮ್ಮ.

ಸಾಮಾನ್ಯವಾಗಿ, ಮನೆಯಲ್ಲಿ ನಾವು ತಂದೆಗಿಂತ ಹೆಚ್ಚಾಗಿ ತಾಯಿ ಮೇಲೆ ಡಿಪೆಂಡ್ ಆಗಿರುತ್ತೇವೆ. ಸ್ನೇಹಿತರ ಜೊತೆ ಆಡಿದ ಜಗಳವನ್ನು, ಸ್ಕೂಲ್-ಕಾಲೇಜಿನಲ್ಲಿ ನಡೆದ ವಿಷಯಗಳನ್ನು, ಇತ್ತೀಚೆಗೆ ನೋಡಿದ ಸಿನಮಾವನ್ನು, ಟೆಸ್ಟ್ ಮಾರ್ಕ್ಸ್ ಗಳನ್ನು, ಫೈನಲ್ ಎಕ್ಸಾಮ್ ರಿಸಲ್ಟ್ ನ್ನು ಅಮ್ಮನ ಜೊತೆ ಹಂಚಿಕೊಳ್ಳದಿದ್ದರೆ ಸಮಾಧಾನವೇ ಆಗಲ್ಲ. ಹಾಗಾಗಿಯೇ ತಾಯಿ ತನ್ನ ಮಕ್ಕಳಿಗೆ ಮಮತೆಯ ಮಡಿಲು.

ತಂದೆ-ತಾಯಿಯ ಮುದ್ದಿನ ಮಗಳು… ಗಂಡನ ಬೆಸ್ಟ್ ಅಡ್ವೈಸರ್… ಅತ್ತೆ-ಮಾವನ ಪಾಲಿಗೆ ಫ್ಯಾಮಿಲಿಡಾಕ್ಟರ್… ಮಕ್ಕಳ ಫ್ರೆಂಡ್ಲಿ ಟೀಚರ್… ಮಕ್ಕಳ-ಗಂಡನ ನಡುವಿನ ಐಡಿಯಲ್ ಮೀಡಿಯೇಟರ್… ಹೀಗೆ, ಟೋಟಲ್ಲಾಗಿ ಮನೆಯ ಪರ್ಫೆಕ್ಟ್ ಓನರ್ ನಮ್ಮೆಲ್ಲರ ಅಮ್ಮ. ತನ್ನ ಹೃದಯದಲ್ಲಿನ “ಭೂಮಿ ತೂಕದ ಸಹನೆ” ಹಾಗು ಮುಖದಲ್ಲಿನ “ಪೂರ್ಣ ಚಂದಿರನ ನಗು”- ಅವಳ ಪ್ಲಸ್ ಪಾಯಿಂಟ್ಸ್.

ತಾನು ಹುಟ್ಟಿ-ಬೆಳೆದ ಮನೆಯನ್ನು ಮದುವೆಯಾದ ನಂತರ ಬಿಟ್ಟು ಬಂದು ತನ್ನ ಗಂಡನಿಗಾಗಿ-ಮಕ್ಕಳಿಗಾಗಿ ತನ್ನನ್ನೇ ತಾನು ಅರ್ಪಿಸಿಕೊಳ್ಳುವ ಸಹನಾಮಯಿ-ಈ ತಾಯಿ. ಮಕ್ಕಳಿಗಾಗಿ ಹಂಬಲಿಸಿ, ಹರಕೆ ಹೊತ್ತು, ಒಂಬತ್ತು ತಿಂಗಳ ಕಾಲ ಕಂದನಿಗಾಗಿ ನೋವು ಅನುಭವಿಸಿ ತನ್ನ ಮಗುವಿನ ಬರುವಿಕೆಗಾಗಿ ಕಾಯುವ ಶಬರಿ- ಈ ತಾಯಿ.

‘ಆ ದೇವರು ಕಟ್ಟಿದ ಗುಡಿಯಲ್ಲಿ- ಗರ್ಭ ಗುಡಿಯಲ್ಲಿ
ಆಡಾ ಬಂದಾನೋ ನನ್ನಯ್ಯಾ……
ಸುವ್ವಿ ಸುವ್ವಲಾಲಿ

ಈ ಅಮ್ಮಾ ಅನ್ನೂ ಅದ್ಭುತ ನೋಡಲು
ಬರುತ್ತೀನಿ ಅಂತಾನೆ, ಕೇಳಿಸಿತೇ ಅಂತಾನೆ….
ಕೇಳಿ ಎಲ್ಲಾ ಕೇಳಿ …

ಆ ದೇವರು ಕಟ್ಟಿದ ತೇರಿನಲ್ಲಿ- ತಾಯಿ ತೇರಿನಲ್ಲಿ
ಕೂರ ಬಂದಾನೋ ನನ್ನಯ್ಯಾ……
ಸುವ್ವಿ ಸುವ್ವಲಾಲಿ”

ಎಂದು ಹಾಡು ಹೇಳುತ್ತಾ, ಒಂಬತ್ತು ತಿಂಗಳನ್ನು ಕಳೆದ ಬಳಿಕ, ಹೆರಿಗೆ ನಂತರ ತನ್ನ ಮುದ್ದುಕಂದನ ನೋಡಿದ ಕೂಡಲೇ ಆ ನೋವನ್ನೇ ಮರೆವ ತ್ಯಾಗಮಯಿ- ಈ ಮಹಾ ತಾಯಿ.

ಇಷ್ಟೆಲ್ಲಾ ಹಾರೈಕೆ ಮಾಡುವ ತಾಯಿಗೆ ಮಕ್ಕಳು, ಅವಳ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳುವ ರೀತಿಯೇ ಬೇರೆ. “ವೃದ್ಧ ತಂದೆ-ತಾಯಿಯನ್ನು ಹೊರಹಾಕಿದ ಮಕ್ಕಳು”, “ಜನ್ಮ ನೀಡಿದ ತಾಯಿಯನ್ನೇ ಕೊಲೆಗೈದ ಮಗ”, ಎಂದು ದಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ತಾನು ಹೆತ್ತು-ಹೊತ್ತ ಮಕ್ಕಳಿಂದಲೇ ವೃದ್ಧಾಶ್ರಮ ಸೇರುವುದಕ್ಕಾಗಲಿ, ತಾನು ಪೋಷಿಸಿ-ಬೆಳಸಿದ ಮಕ್ಕಳಿಂದಲೇ ಕೊಲೆಯಾವುದಕ್ಕಾಗಲಿ ಆ ಮಹಾ ತಾಯಿ ಭೂಮಿಗೆ ಬಂದಿಲ್ಲ. “ನಾನು ಎಲ್ಲೆಲ್ಲೂ ಇರಲಾಗದು ಎಂದು, ದೇವರೇ ಭೂಮಿಯ ಮೇಲೆ ಸೃಷ್ಟಿಸಿದ ಅದ್ಭುತವೇ- ಈ ತಾಯಿ”. ಇಳಿವಯಸ್ಸಿನ ತಾಯಿ-ತಂದೆಯರ ಹಾರೈಕೆ-ಪೋಷಣೆ ಮಾಡುವುದು ನಮ್ಮಲ್ಲೆರ ಅದ್ಯ ಕರ್ತವ್ಯ.

ಮೊನ್ನೆ ತಾನೇ ನ್ಯೂಸ್ ಪೇಪರ್ ನಲ್ಲಿ “ತಾಯಿಗೆ ಬೆಂಕಿ ಹಚ್ಚಿದ ಮಗನ ಸೆರೆ” ಎನ್ನುವ ಹೆಡ್ ಲೈನ್ ಓದಿ, ದಿಗ್ಬ್ರಮೆಗೊಂಡೆ. ನಮ್ಮ “ಹುಟ್ಟುಹಬ್ಬ” ನಮಗೆ “ಹೊಸ ಜನ್ಮದ ದಿನವಾದರೆ”, ತಾಯಿಗೆ “ಮರು ಜನ್ಮದ ದಿನ”. ನಮ್ಮ “ಹುಟ್ಟುಹಬ್ಬದ” ದಿನವನ್ನು ತಾಯಿಯ “ಮರುಜನ್ಮದ ದಿನ” ವಾಗಿ ಆಚರಿಸಿದರೆ, ಜನ್ಮ ನೀಡಿದ ತಾಯಿಗೆ ನಾವು ನೀಡುವ ಅತೀ “ದೊಡ್ಡ ಗಿಫ್ಟ್” ಎಂದು ನಾನು ಭಾವಿಸಿದ್ದೇನೆ.

ಇಂದು ಅಮ್ಮಂದಿರ ದಿನ, ಅಮ್ಮನಿಗೆ ಪ್ರೀತಿಯಿಂದ ಹೇಳಿ ಒಂದು ಮಾತು “ಅಮ್ಮ ಐ ಲವ್ ಯು”..

-ಸಂಪತ್ ಕುಮಾರ್ ಬೆಳಗೆರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top